ಬೆಳ್ಮಣ್ಣು ಜಿಪಂ ಕ್ಷೇತ್ರದಲ್ಲಿ 8.26 ಕೋ.ರೂ ಅಭಿವೃದ್ಧಿ ಕಾಮಗಾರಿ
ಕಾರ್ಕಳ, ಜ.4: ಬೆಳ್ಮಣ್ಣು ಜಿಪಂ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ 8.26 ಕೋ.ರೂ. ಮೊತ್ತದ ಕಾಮಗಾರಿ ನಡೆದಿದೆ ಎಂದು ಜಿಪಂ ಸದಸ್ಯ ಕೆದಿಂಜೆ ಸುಪ್ರೀತ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಉಡುಪಿ ಜಿಪಂ ಕ್ಷೇತ್ರಗಳ ಪೈಕಿ 18 ನೀರಿನ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡುವುದರ ಮೂಲಕ ಬೆಳ್ಮಣ್ಣು ಜಿಪಂ ಕ್ಷೇತ್ರ ಮುನ್ನಡೆ ಸಾಧಿಸಿದೆ. ಅಲ್ಲದೆ ಇದರ ಜತೆ ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಂದಳಿಕೆ ದೇವಳ ರಸ್ತೆ, ಗೋಳಿಕಟ್ಟೆ ರಸ್ತೆ, ಜಾರಿಗೆಕಟ್ಟೆ ರಸ್ತೆ, ಮುಲ್ಲಡ್ಕ ರಸ್ತೆ, ಇನ್ನ ಮುದ್ದಾಣು ರಸ್ತೆ, ಇನ್ನ ಕಲ್ಲಕಟ್ಟ ಡ್ಯಾಂ ಮತ್ತು ಸೇತುವೆ ನಿರ್ಮಾಣ, ಬೆಳ್ಮಣ್ಣು ದೇವಸ್ಥಾನ ರಸ್ತೆ, ನಿಟ್ಟೆ ಕಂಬಳಕೋಡಿ ನುರ್ಲಬೈಲು ರಸ್ತೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿಟ್ಟೆ ಕೆಮ್ಮಣ್ಣು ಬರಬೈಲು ರಸ್ತೆ, ಇಟ್ಟಮೇರಿ ಬೋಳ ಕೋಡಿ ಸಚ್ಚರಿಪೇಟೆ ರಸ್ತೆ, ನಿಟ್ಟೆ ಕಲ್ಕಾರು ಸಾಣೂರು ಸಂಪರ್ಕ ರಸ್ತೆಗೆ ಸೇತುವೆ, ಮುಂಡ್ಕೂರು, ಇನ್ನ, ಪಲಿಮಾರು ರಸ್ತೆಗೆ ಸೇತುವೆ ನಿರ್ಮಾಣದಂತಹ ಮಹತ್ವದ ಕಾಮಗಾರಿಗಳು ಆಗಿವೆ ಎಂದವರು ವಿವರಿಸಿದರು. ತಾಪಂ ಸದಸ್ಯ ಕ್ಸೇವಿಯರ್ ಡಿಮೆಲ್ಲೊ ಮಾತನಾಡಿ, ತಾಪಂನಲ್ಲಿ ಆಡಳಿತ ನಿಷ್ಕ್ರಿಯತೆ, ಅಧಿಕಾರಿಗಳ ಅಸಹಕಾರ ಮತ್ತು ಅನುದಾನದಲ್ಲಿ ತಾರತಮ್ಯ ಎಸಗಿದ ಕಾರಣ ತನ್ನ್ನ ಕ್ಷೇತ್ರದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಲು ಸಾಧ್ಯವಾಗಿಲ್ಲ. ಆದರೂ 48 ಲಕ್ಷ ರೂ. ಕಾಮಗಾರಿ ತನ್ನ ಬೆಳ್ಮಣ್ಣು ಕ್ಷೇತ್ರದಲ್ಲಾಗಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಉಪಸ್ಥಿತರಿದ್ದರು.





