ಬಾಂಗ್ಲಾದೇಶ: ಭೂಕಂಪಕ್ಕೆ 3 ಬಲಿ; 100ಕ್ಕೂ ಅಧಿಕ ಮಂದಿಗೆ ಗಾಯ
ಢಾಕಾ, ಜ.4: ಈಶಾನ್ಯ ಭಾರತದಲ್ಲಿ ಕೇಂದ್ರಬಿಂದುವನ್ನು ಹೊಂದಿದ್ದ 6.7 ತೀವ್ರತೆಯ ಭೂಕಂಪದ ಪರಿಣಾಮ ಬಾಂಗ್ಲಾದೇಶದಲ್ಲೂ ಮೂವರು ಸಾವಿಗೀಡಾಗಿದ್ದು, ಇತರ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಪನದ ಪರಿಣಾಮ ಉಂಟಾದ ಹೃದಯಾಘಾತದಿಂದ ಮೂವರ ಸಾವು ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಾಯವ್ಯ ಢಾಕಾದ ರಾಜ್‌ಶಾಹಿ ಹಾಗೂ ಲಾಲ್‌ಮೋನಿರ್ಹಾತ್ ಪ್ರದೇಶಗಳಿಂದ ಸಾವಿನ ಪ್ರಕರಣಗಳು ವರದಿಯಾಗಿವೆ.
ಸ್ಥಳೀಯ ಕಾಲಮಾನ ಮುಂಜಾನೆಯ 4:35ಕ್ಕೆ ಸಂಭವಿಸಿದ ಕಂಪನವು ಭಾರತದ ಇಂಫಾಲ್‌ನ ವಾಯವ್ಯಕ್ಕೆ 29 ಕಿ.ಮೀ. ದೂರದಲ್ಲಿ ಕೇಂದ್ರೀಕರಿಸಿತ್ತು ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದಾದ್ಯಂತ ಕಂಪನವು ಅನುಭವಕ್ಕೆ ಬಂದಿರುವುದಾಗಿ ವರದಿಯಾಗಿದೆ. ಢಾಕಾದ ಬಂಗ್‌ಶಾಲ್ ಹಾಗೂ ಶಂಕರಿಬಝಾರ್‌ಗಳಲ್ಲಿ ಆರು ಅಂತಸ್ತಿನ ಕಟ್ಟಡವೊಂದು ವಾಲಿದ್ದು, ಇನ್ನೊಂದು ಕಟ್ಟಡದಲ್ಲಿ ಬಿರುಕು ಉಂಟಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಕಂಪನದ ಪರಿಣಾಮ ಢಾಕಾದ ಹೊರವಲಯದ ಅಶುಲಿಯಾದಲ್ಲಿ ಅನಿಲ ಕೊಳವೆ ಮಾರ್ಗವೊಂದು ಸ್ಫೋಟಿಸಿದಾಗ ಕಾಣಿಸಿಕೊಂಡ ಬೆಂಕಿಯನ್ನು ತಕ್ಷಣವೇ ಆರಿಸಲಾಯಿತು ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಢಾಕಾ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಳಲ್ಲಿನ ಸುಮಾರು 30 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿರುವ 32 ಮಂದಿಯನ್ನು ಸಿಲ್ಹೆತ್‌ನಲ್ಲಿರುವ ಸರಕಾರಿ ಆಸ್ಪತ್ತೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಢಾಕಾದಲ್ಲಿ ಅನುಭವಕ್ಕೆ ಬಂದಿರುವ ಭೂಕಂಪದ ತೀವ್ರತೆಯ ರಿಕ್ಟರ್ ಮಾಪಕದಲ್ಲಿ 4ರಷ್ಟಿತ್ತು ಮತ್ತು ಅದು ಭೂಮಿಯ ಮೇಲ್ಪದರದಲ್ಲಿ ಉಂಟಾಗಿತ್ತು ಎಂದು ಪ್ರಕೃತಿ ವಿಕೋಪ ತಜ್ಞರು ತಿಳಿಸಿದ್ದಾರೆ.