ಮತ್ತೆ ಗರಿಗೆದರುತ್ತಿರುವ ಮಂದಿರ ನಿರ್ಮಾಣದ ವಿವಾದ
ಈಗಾಗಲೇ ನ್ಯಾಯಾಲಯದಲ್ಲಿರುವ ವಿವಾದವನ್ನು ಬಹಿರಂಗವಾಗಿ ಚರ್ಚಿಸುತ್ತ, 2017ರಲ್ಲಿ ಮಂದಿರ ನಿರ್ಮಾಣ ಮಾಡಿಯೇ ಮಾಡುತ್ತೇವೆಂಬ ಹೇಳಿಕೆ ನೀಡುವುದರ ಮೂಲಕ ಸಂಘ ಪರಿವಾರ ತನ್ನ ರಾಜಕೀಯದ ಮಹತ್ವಾಕಾಂಕ್ಷೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡುತ್ತಿದೆ. ಮಂದಿರ ನಿಮಾಣ ಮಾಡುವ ದಿಸೆಯಲ್ಲಿ ಸಂಘಪರಿವಾರವೇನು ವೌನವಾಗಿ ಕುಳಿತಿಲ್ಲ. ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿಗಳನ್ನು ಈಗಾಗಲೇ ಸಂಗ್ರಹಿಸಲು ತೊಡಗಿದ್ದು, ನಿರ್ಮಾಣಕ್ಕೆ ಬೇಕಾದ ಸೂಕ್ತ ಸಮಯದ ನಿರೀಕ್ಷೆಯಲ್ಲಿ ಕಾದು ಕುಳಿತಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು 2016ರಲ್ಲಿ ಮಾಡಿಯೇ ತೀರುತ್ತೇವೆಂದು ಹೇಳುವ ಮೂಲಕ ಸಂಘಪರಿವಾರ ಮತ್ತೊಮ್ಮೆ ತನ್ನ ಹಳೆಯ ಚಾಳಿಯನ್ನು ತೋರಿಸುತ್ತಿದೆ. ಸತತವಾಗಿ ರಾಜ್ಯ ವಿಧಾನಸಭೆಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಭಾಜಪ ಸೋಲನ್ನು ಅನುಭವಿಸುತ್ತಿರುವುದೇ, ಹೀಗೆ ಮರೆತು ಹೋಗಿದ್ದ ಮಂದಿರ ನಿರ್ಮಾಣದ ವಿಷಯವನ್ನು ಮತ್ತೊಮ್ಮೆ ಚರ್ಚೆಯ ವಿಷಯವನ್ನಾಗಿ ಮಾಡಲಿರುವ ಮುಖ್ಯ ಕಾರಣವೆಂದರೆ ತಪ್ಪಾಗಲಾರದು. ಜೊತೆಗೆ 2017ರ ಪ್ರಾರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು ಸಹ ಅದು ಮನಸಲ್ಲಿಟ್ಟುಕೊಂಡಿರುವಂತೆ ಕಾಣುತ್ತಿದೆ.
ಇಂತಹದೊಂದು ಉದ್ದೇಶವನ್ನಿಟ್ಟುಕೊಂಡೇ ಕೇಂದ್ರದ ಸಂಸ್ಕೃತಿ ಸಚಿವರಾದ ಮಹೇಶ್‌ಶರ್ಮಾರವರು 2017ರಲ್ಲಿ ಭಾಜಪದ ಸರಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಮಾಡುತ್ತದೆಯೆಂದು ಘಂಟಾಘೋಷವಾಗಿ ಸಾರಿ ಹೇಳಿದ್ದಾರೆ. ಚಳಿಗಾಲದ ಸಂಸತ್ತಿನ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇನ್ನೊಬ್ಬ ಪ್ರಮುಖ ಸಚಿವರಾದ ವೆಂಕಯ್ಯನಾಯ್ಡುರವರು ಸಹ ಮಂದಿರ ನಿರ್ಮಾಣಕ್ಕೆ ಸರಕಾರ ಬದ್ಧವಾಗಿದೆಯೆಂದು ಹೇಳುವ ಮೂಲಕ ತಣ್ಣಗಾಗಿದ್ದ ವಿವಾದವನ್ನು ಮತ್ತೊಮ್ಮೆ ಜೀವಂತವಾಗಿರುವಂತೆ ನೋಡಿಕೊಳ್ಳುವ ಯತ್ನ ಮಾಡಿದ್ದಾರೆ. ಜೊತೆಗೆೆ ಈ ಬಗ್ಗೆ ಮಾತನಾಡುತ್ತ ಶರ್ಮಾರವರು ‘‘ಮಂದಿರ ನಿರ್ಮಾಣವನ್ನು ನ್ಯಾಯಾಲಯದ ಆದೇಶದಂತೆ ಅಥವಾ ಎರಡೂ ಕೋಮುಗಳ ಒಮ್ಮತದಿಂದ ನಿರ್ಮಾಣ ಮಾಡಲಾಗುವುದು’’ಎಂಬ ಬುದ್ಧ್ದಿವಂತಿಕೆಯ ಹೇಳಿಕೆ ನೀಡಿ ಜನರ ದಾರಿತಪ್ಪಿಸುವ ಪ್ರಯತ್ನವನ್ನು ಮಾಡಿದ್ದಾರೆ. ಜೊತೆಗೆ ಅಯೋಧ್ಯೆಯಲ್ಲಿ ರಾಮಾಯಣದ ಬಗ್ಗೆ ಒಂದು ವಸ್ತು ಸಂಗ್ರಹಾಲಯ ನಿರ್ಮಿಸಲು ಸರಕಾರ ನಿರ್ಧರಿಸಿದ್ದು ಕೇಂದ್ರ ಅದಕ್ಕೆ ಸುಮಾರು 170 ಕೋಟಿ ರೂಪಾಯಿಗಳನ್ನು ಕೊಡಲು ಒಪ್ಪಿಗೆ ನೀಡಿದ್ದು, ಅದನ್ನು ‘ರಾಮ ವನ ಗಮನ ಪರಿಷತ್’ನ ಮೂಲಕ ಅನುಷ್ಠಾನಗೊಳಿಸಲಾಗುವುದೆಂಬ ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ. ಭಾಜಪದ ಮತ್ತೊಬ್ಬ ಸಂಸದ ಸತ್ಯಪಾಲ್ ಸಿಂಗ್ ಈ ನಿರ್ಧಾರವನ್ನು ಸ್ವಾಗತಿಸುತ್ತ ತಾನು ಕಳೆದ ಅಗಸ್ಟ್ ತಿಂಗಳಲ್ಲಿಯೇ ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾಗಿ ಹೇಳಿದ್ದಾರೆ. ಇಂತಹ ಹೇಳಿಕೆಗಳಿಂದಾಗಬಹುದಾದ ಮುಜುಗರ ತಪ್ಪಿಸಲು ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಮಾತ್ರ ನ್ಯಾಯಾಲಯ ಇದನ್ನು ಬಗೆಹರಿಸುತ್ತದೆ ಮತ್ತು ನ್ಯಾಯಾಂಗದ ಆಚೆಯೇ ಈ ವಿವಾದವನ್ನು ಬಗೆಹರಿಸಲು ಭಾಜಪ ಪ್ರಯತ್ನಿಸುವುದಾಗಿ ಹೇಳುತ್ತಾ ಮಂದಿರ ನಿರ್ಮಾಣಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲವೆಂದು ಸೆಗಣಿ ಸಾರಿಸುವ ಕೆಲಸ ಮಾಡಿದ್ದಾರೆ.
ಆದರೆ ಈಗಾಗಲೇ ನ್ಯಾಯಾಲಯದಲ್ಲಿರುವ ವಿವಾದವನ್ನು ಬಹಿರಂಗವಾಗಿ ಚರ್ಚಿಸುತ್ತ, 2017ರಲ್ಲಿ ಮಂದಿರ ನಿರ್ಮಾಣ ಮಾಡಿಯೇ ಮಾಡುತ್ತೇವೆಂಬ ಹೇಳಿಕೆ ನೀಡುವುದರ ಮೂಲಕ ಸಂಘ ಪರಿವಾರ ತನ್ನ ರಾಜಕೀಯದ ಮಹತ್ವಾಕಾಂಕ್ಷೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡುತ್ತಿದೆ. ಮಂದಿರ ನಿಮಾಣ ಮಾಡುವ ದಿಸೆಯಲ್ಲಿ ಸಂಘಪರಿವಾರವೇನು ವೌನವಾಗಿ ಕುಳಿತಿಲ್ಲ. ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಈಗಾಗಲೇ ಸಂಗ್ರಹಿಸಲು ತೊಡಗಿದ್ದು, ನಿರ್ಮಾಣಕ್ಕೆ ಬೇಕಾದ ಸೂಕ್ತ ಸಮಯದ ನಿರೀಕ್ಷೆಯಲ್ಲಿ ಕಾದು ಕುಳಿತಿದೆ.
ಕಳೆದ ತಿಂಗಳು ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ವಿಶ್ವ ಹಿಂದೂ ಪರಿಷತ್ತಿನ ವಕ್ತಾರರಾದ ಶರದ್ ಶರ್ಮಾ, ಮಂದಿರ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿರುವ ಎರಡು ಲೋಡ್ ಕಲ್ಲುಗಳು ಅಯೋಧ್ಯೆಯ ‘ರಾಮಸೇವಕ್ ಪುರ’ಕ್ಕೆ ಬಂದಿಳಿದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದರು. ನಂತರ ರಾಮಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮ ಶಿಲಾನ್ಯಾಸ ಸಮಿತಿಯ ಅಧ್ಯಕ್ಷರಾದ ಮಹಂತ ನೃತ್ಯ ಗೋಪಾಲದಾಸ್ ಸದರಿ ಶಿಲೆಗಳಿಗೆ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ದಾಸ್ ಅವರು ‘‘ಇನ್ನಷ್ಟು ಕಲ್ಲುಗಳು ಶೀಘ್ರದಲ್ಲಿಯೇ ಅಯೋಧ್ಯೆಯನ್ನು ತಲುಪಲಿದ್ದು, ನರೇಂದ್ರಮೋದಿ ನೇತೃತ್ವದ ಕೇಂದ್ರದ ಭಾಜಪ ಸರಕಾರ ಇದಕ್ಕೆ ಹಸಿರು ನಿಶಾನೆ ತೋರಿಸಿದೆ’ಯೆಂದು ಸಹ ಹೇಳಿಕೆ ನೀಡಿದ್ದರು.
ಇವೆಲ್ಲದರೊಂದಿಗೆ ಅವಕಾಶ ಸಿಕ್ಕಾಗಲೆಲ್ಲ ಭಾಜಪದ ಹಿರಿಯ ನಾಯಕರುಗಳು, ಸಚಿವರು, ಸಂಘಪರಿವಾರದವರು ಅಯೋಧ್ಯೆೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ತಮ್ಮ ಆಶಯವನ್ನು ಯಾವ ಸಂಕೋಚವೂ ಇಲ್ಲದೆ, ನ್ಯಾಯಾಲಯದ ತೀರ್ಪನ್ನು ಕಾಯುವ ಯಾವ ಸಹನೆಯೂ ಇಲ್ಲದೆ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಒಂದಷ್ಟು ದಿನಗಳ ಹಿಂದೆ ಭಾಜಪದ ಹಿರಿಯ ನಾಯಕರು ಮತ್ತು ಕೇಂದ್ರ ಸಚಿವರೂ ಆದ ತ್ಯಾವರಚಂದ್ ಗೆಹ್ಲೋಟ್ ಅವರು ಮಾತಾಡುತ್ತಾ, ‘‘ವಿಶ್ವ ಹಿಂದೂ ಪರಿಷತ್ತಿನ ಹಿಂದಿನ ಅಧ್ಯಕ್ಷರಾದ ಅಶೋಕ್ ಸಿಂಘಾಲ್‌ರವರು ತಮ್ಮ ಇಡೀ ಜೀವಮಾನವನ್ನು ಮಂದಿರ ನಿರ್ಮಾಣದ ಹೋರಾಟಕ್ಕೆ ಮುಡುಪಾಗಿಟ್ಟಿದ್ದನ್ನು ಸ್ಮರಿಸುತ್ತ, ರಾಮಮಂದಿರ ನಿರ್ಮಾಣ ಮಾಡುವುದೇ ಅವರಿಗೆ ಸಲ್ಲಿಸುವ ಶ್ರದ್ಧ್ದಾಂಜಲಿ’’ಯೆಂದು ಹೇಳಿದ್ದರು. ಆರೆಸ್ಸೆಸ್‌ನ ಮುಖ್ಯಸ್ಥರಾದ ಮೋಹನ ಭಾಗವತ್ ಸಹ ಇಂತಹದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದನ್ನೂ ನಾವು ನೋಡಬಹುದು.
ಆದರೆ ಪ್ರಧಾನಮಂತ್ರಿ ನರೇಂದ್ರಮೋದಿಯವರು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲವೇನೊ ಎಂಬಂತೆ ಮೌನ ತಳೆದಿದ್ದಾರೆ. ಅದರರ್ಥ ಅವರಿಗೆ ಮಂದಿರ ನಿರ್ಮಾಣದ ಬಗ್ಗೆ ಒಲವಿಲ್ಲವೆಂದೇನು ಅಲ್ಲ. ಬದಲಿಗೆ ಮಂದಿರ ನಿರ್ಮಾಣದ ವಿಷಯದಲ್ಲಿ ತಾವು ಸಂಘಪರಿವಾರದವರೊಂದಿಗಿಲ್ಲ ಎಂಬುದನ್ನು ತೋರಿಸಿಕೊಳ್ಳುತ್ತಲೇ ಅದರ ನಿರ್ಮಾಣಕ್ಕಿರಬಹುದಾದ ಅಡಚಣೆಗಳನ್ನು ನಿವಾರಿಸುವುದಾಗಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಬಹುಶ: ಮೊನ್ನೆಯ ಅವರ ಅನಿರೀಕ್ಷಿತ ಪಾಕಿಸ್ತಾನದ ಭೇಟಿಯೂ ಅಂತಹದೇ ರಾಜಕೀಯ ತಂತ್ರದ ಭಾಗವಾಗಿರಬಹು ದೆಂಬ ಅನುಮಾನ ಮೂಡಿಸುತ್ತಿದೆ. ಯಾಕೆಂದರೆ ಅವರು ಪ್ರಧಾನ ಮಂತ್ರಿಯಾದಾಗಲಿಂದಲೂ ಹಲವಾರು ವಿದೇಶ ಪ್ರವಾಸಗಳನ್ನು ಕೈಗೊಳ್ಳುತ್ತಾ, ಇತರೇ ದೇಶಗಳೊಡನೆ ಅನೇಕ ಆರ್ಥಿಕ ಒಡಂಬಡಿಕೆಗಳನ್ನು ಮಾಡಿಕೊಂಡು ತಾವು ಮತ್ತು ತಮ್ಮ ಸರಕಾರ ಕೇವಲ ದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧ್ದಿಯತ್ತ ಮಾತ್ರ ಆಸಕ್ತಿ ವಹಿಸಿದ್ದೇವೆಂಬ ಸಕಾರಾತ್ಮಕ ಅಭಿಪ್ರಾಯವನ್ನು ಒಳಗೂ ಹೊರಗೂ ಬಿಂಬಿಸುತ್ತ, ಮುಂದೆ ನಡೆಯಬಹುದಾದ ರಾಮಮಂದಿರ ನಿರ್ಮಾಣದ ವಿವಾದಿತ ವಿಚಾರದಲ್ಲಿ ತಮ್ಮ ಪಾತ್ರವೇನೂ ಇಲ್ಲವೆಂಬುದನ್ನು ತೋರಿಸಿಕೊಳ್ಳುವುದಾಗಿದೆ. ಈ ದಿಸೆಯಲ್ಲಿಯೇ ಅವರ ವಿದೇಶಿ ಪ್ರವಾಸಗಳು ನಡೆಯುತ್ತಿವೆಯೆಂಬ ಅನುಮಾನ ಮೂಡಲು ಕಾರಣವಿದೆ. ಪಾಕಿಸ್ತಾನದ ಅನಿರೀಕ್ಷಿತ ಭೇಟಿಯಿಂದ ತಮಗಾಗಬಹುದಾದ ಲಾಭದ ಲೆಕ್ಕಾಚಾರ ಹಾಕದೆ ದಿಢೀರನೆ ಅಂತಹದೊಂದು ನಿರ್ಧಾರವನ್ನು ಮೋದಿಯವರಂತಹ ನುರಿತ ರಾಜಕಾರಣಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದೂ ಅಲ್ಲದೇ ಬಲಪಂಥೀಯ ಹಿಂದೂ ಸಂಘಟನೆಗಳ ವಿರೋಧದ ನಡುವೆಯೂ ಶತ್ರುರಾಷ್ಟ್ರವಾದ ಪಾಕಿಸ್ತಾನಕ್ಕೆ ಹೋಗಿಬಂದ ಶಾಂತಿಪ್ರಿಯ ಪ್ರಧಾನಿಯೆಂಬ ಹೆಗ್ಗಳಿಕೆ ಪಡೆಯುವುದರ ಮೂಲಕ ಮುಂದೆ ಮಂದಿರ ನಿರ್ಮಾಣದ ವಿಚಾರದಲ್ಲಿ ನಡೆಯಬಹುದಾದ ವಿವಾದಿತ ಅಹಿತಕರ ಘಟನೆಗಳ ಹೊಣೆಗಾರಿಕೆಯಿಂದ ತಾವು ನುಣುಚಿಕೊಳ್ಳಬಹುದೆಂಬ ಅವರ ದೂರದೃಷ್ಟಿಯೂ ಈ ವಿಷಯದಲ್ಲಿ ಕೆಲಸ ಮಾಡಿರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಹೀಗೆ ಸಂಘಪರಿವಾರದ ಕೋಮುವಾದಿ ಚಟುವಟಿಕೆಗಳಿಂದ ಒಂದು ಅಂತರವನ್ನು ಕಾಯ್ದುಕೊಳ್ಳುವ ಕ್ರಿಯೆಯಲ್ಲಿ ತೊಡಗಿಕೊಂಡಿರುವ ನರೇಂದ್ರಮೋದಿಯವರು ತಮ್ಮ ಚಾಣಾಕ್ಷತೆಯನ್ನು ತೋರುತ್ತಿದ್ದಾರೆ. ರಾಜಕೀಯವಾಗಿ ಕಾಂಗ್ರೆಸ್ಸಿನಷ್ಟೇ ಅಥವಾ ಅದಕ್ಕಿಂತ ಸ್ವಲ್ಪಹೆಚ್ಚೇ ಎನ್ನುವಷ್ಟು ಬಲಾಢ್ಯವಾಗಿರುವ ಭಾಜಪಕ್ಕೀಗ ತನ್ನ ಪರಿವಾರದವರ ಗುರಿಯಾದ ಮಂದಿರ ನಿರ್ಮಾಣ ಮಾಡುತ್ತಲೇ, ತಾನು ಅದರ ಕಳಂಕವನ್ನು ಮೈಗಚ್ಚಿಕೊಳ್ಳದಂತೆ ನೋಡಿಕೊಳ್ಳುವ ತಂತ್ರಗಾರಿಕೆ ನಡೆಸುತ್ತಿದೆ.
2017ರಲ್ಲಿ ನಡೆಯಲಿರುವ ಉತ್ತರ ಪ್ರದೇಶದ ಚುನಾವಣೆಯ ಹೊತ್ತಿಗೆ ಹಿಂದೂ ಮತಗಳನ್ನು ಧ್ರುವೀಕರಣಗೊಳಿಸುವುದು ಸಂಘಪರಿವಾರದ ಮುಖ್ಯ ಗುರಿಯಾಗಿದೆ. ಆದರೆ ಅಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಇಂತಹದೊಂದು ಧ್ರುವೀಕರಣಕ್ಕೆ ಅಡ್ಡಿಯಾಗಿ ನಿಂತಿವೆ. ಹಾಗಾಗಿಯೇ ಕಾಂಗ್ರೆಸ್ ಬಹುಜನ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದೆ. ಯಾಕೆಂದರೆ ಸದ್ಯದ ಸ್ಥಿತಿಯಲ್ಲಿ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವರನ್ನು ನಂಬುವ ಸ್ಥಿತಿಯಲ್ಲಿ ಬೇರ್ಯಾವ ಪಕ್ಷಗಳೂ ಇಲ್ಲ. ತಮ್ಮ ತಲೆಯ ಮೇಲೆ ತೂಗುತ್ತಿರುವ ಸಿ.ಬಿ.ಐ. ಕತ್ತಿಯಿಂದ ಪಾರಾಗಲು ಮುಲಾಯಂ ಯಾವ ನಡೆಯನ್ನು ಬೇಕಾದರೂ ನಡೆಸಲು ಸಿದ್ಧ್ದರಿದ್ದು ಪರೋಕ್ಷವಾಗಿ ಭಾಜಪದ ಬೆಂಬಲಕ್ಕೆ ನಿಲ್ಲ ಬಹುದಾಗಿದೆ. ಹೀಗಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ನಡೆಯಲಿರುವ ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಂದಿರ ನಿರ್ಮಾಣದ ವಿಷಯ ಮಹತ್ವ ಪಡೆಯಲಿದೆ.
ಆದರೆ ಈ ಬಾರಿ ಮಂದಿರ ನಿರ್ಮಾಣದ ವಿವಾದ ಭಾಜಪಕ್ಕೆ ವರವಾಗುವ ಬದಲು ಶಾಪವಾಗುವ ಸಂಭವವಿದೆ. ಕಾರಣ ಯಾರೇನೇ ಹೇಳಿದರೂ ಬದಲಾಗುತ್ತಿರುವ ಆರ್ಥಿಕ ಬೆಳವಣಿಗೆಗಳ ಫಲಾನುಭವಿಗಳಾಗಿರುವ ಮೇಲು ಮಧ್ಯಮವರ್ಗವಾಗಲಿ ಮೇಲ್ಜಾತಿಗಳಾಗಲಿ ಇಂತಹ ವಿವಾದಿತ ವಿಷಯಗಳಿಂದಾಗಿ ತಮಗೆ ದೊರೆಯುತ್ತಿರುವ ಲಾಭವನ್ನು ತ್ಯಾಗ ಮಾಡಲು ಸಿದ್ಧ್ದರಾಗಿಲ್ಲ. ಹಾಗಾಗಿ ಭಾಜಪಕ್ಕೆ ಮಂದಿರ ನಿರ್ಮಾಣದ ವಿಷಯ ಸಂಪೂರ್ಣ ಲಾಭ ತರುವುದು ಕಷ್ಟಕರವಾಗಿದೆ.
ಹೀಗಾಗಿಯೇ 2016ರ ಮಧ್ಯಭಾಗದಲ್ಲಿ ಮತ್ತು 2017ರಲ್ಲಿ ನಡೆಯಲಿರುವ ರಾಜ್ಯವಿಧಾನಸಭಾ ಚುನಾವಣೆಗಳು ಜನಪರ ವಿಷಯಗಳ ಆಧಾರದಲ್ಲಿ ನಡೆಯುತ್ತವೆಂದು ನಾವು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ ಎನಿಸುತ್ತಿದೆ.