ಶಾಂತಿ ಒಪ್ಪಂದ: ರಶ್ಯಕ್ಕೆ ಜಪಾನ್ ಕರೆ
ಟೋಕಿಯೊ, ಜ.4: ಜಪಾನ್‌ನ ಪ್ರಧಾನಿ ಶಿಂರೊ ಅಬೆ ರಶ್ಯದ ಅಧ್ಯಕ್ಷರನ್ನು ಮಾತುಕತೆಗೆ ಆಹ್ವಾನಿಸಿದ್ದು, ಉಭಯ ರಾಷ್ಟ್ರಗಳು ಶಾಂತಿ ಒಪ್ಪಂದದ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದ್ದಾರೆ.
ನಾಲ್ಕು ವಿವಾದಿತ ದ್ವೀಪಗಳಿಗೆ ಸಂಬಂಧಿಸಿದ ಸಂಘರ್ಷದಿಂದಾಗಿ ಎರಡನೆ ಪ್ರಪಂಚ ಯುದ್ಧದ ಬಳಿಕ ಈ ಎರಡು ರಾಷ್ಟ್ರಗಳ ನಡುವೆ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ. ಕಳೆದ ಸುಮಾರು 70 ವರ್ಷಗಳ ಅವಧಿಯಲ್ಲಿ ಈ ರೀತಿಯ ಯಾವುದೇ ಒಂದು ಮಹತ್ವದ ದ್ವಿಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳದಿರುವುದು ‘ಅಸಹಜ’ವಾಗಿದೆ ಎಂಬುದಾಗಿ ಉಭಯ ಮುಖಂಡರು ಒಪ್ಪಿಕೊಂಡಿದ್ದಾರೆ. 2012ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಜಪಾನ್‌ನ ಪ್ರಧಾನಿ ಶಿಂರೊ ಅಬೆ ಮಾಸ್ಕೊದೊಂದಿಗೆ ಸಂಬಂಧ ಸುಧಾರಿಸುವ ಸಂಬಂಧ ಹಲವು ಬಾರಿ ಯತ್ನಿಸಿದ್ದರು. ಜಪಾನ್ 1945ರಿಂದಲೂ ತನ್ನ ಉತ್ತರದ ಪ್ರಾಂತವೆಂದು ಹೇಳಿಕೊಳ್ಳುತ್ತಿರುವ ದ್ವೀಪಗಳನ್ನು ಮಾಜಿ ಸೋವಿಯತ್ ಒಕ್ಕೂಟವು ತನ್ನ ವಶದಲ್ಲಿ ಇರಿಸಿಕೊಂಡಿದೆ.
ರಶ್ಯವು ಈ ವಿವಾದಿತ ದ್ವೀಪಗಳ ಪ್ರದೇಶವನ್ನು ದಕ್ಷಿಣ ಕುರ್ಲಿಸ್ ಎಂಬುದಾಗಿ ಹೆಸರಿಸಿದೆ.
ಈ ವಿಷಯಕ್ಕೆ ಸಂಬಂಧಿಸಿ ಶಿಂರೊ ಅಬೆ ಹಾಗೂ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುತಿನ್ 2013ರಲ್ಲಿ ಒಂದು ಬಾರಿ ಮಾತುಕತೆ ನಡೆಸಿದ್ದರು.
ಎರಡು ರಾಷ್ಟ್ರಗಳು ಶಾಂತಿ ಒಪ್ಪಂದವನ್ನು ಮಾಡಿಕೊಳ್ಳದಿರುವುದು ಒಂದು ಅತ್ಯಂತ ಅಸಹಜ ಕ್ರಮವಾಗಿದೆ ಎಂಬುದನ್ನು ಉಭಯ ನಾಯಕರು ಒಪ್ಪಿಕೊಂಡಿರುವುದಾಗಿ ಹೊಸ ವರ್ಷದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಬೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಪಾನ್ ಹಾಗೂ ರಶ್ಯ 1956ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ್ದವು. ಆದರೆ ನಿರ್ದಿಷ್ಟ ಶೃಂಗಸಭೆಯ ಹೊರತಾಗಿ ಗಡಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ಸಾಧ್ಯವಾಗದು ಎಂದವರು ಹೇಳಿದ್ದಾರೆ.
ಅವಕಾಶಗಳು ದೊರೆತಲ್ಲಿ ರಶ್ಯದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲು ತಾನು ಸಿದ್ಧನಿರುವುದಾಗಿ ಜಪಾನ್‌ನ ಪ್ರಧಾನಿ ಹೇಳಿದ್ದಾರೆ.