ಝುಕರ್‌ಬರ್ಗ್‌ನಿಂದ ಕೃತಕ ಬುದ್ಧಿಮತ್ತೆ ಅಭಿವೃದ್ಧಿ

ವಾಷಿಂಗ್ಟನ್, ಜ.4: ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ತನಗೆ ಸಹಾಯಕವಾಗುವ ರೀತಿಯಲ್ಲಿ ತನ್ನ ನಿವಾಸ ಹಾಗೂ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಕೃತಕ ಬುದ್ಧಿಮತ್ತೆ(ಎಐ) ವ್ಯವಸ್ಥೆಯೊಂದನ್ನು ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ‘ಸಿಂಪಲ್ ಎಐ’ ಎಂಬ ಹೆಸರಿನ ನೂತನವಾದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ತನ್ನ ಧ್ವನಿಯನ್ನು ಗುರುತಿಸುವುದರಿಂದ ಹಿಡಿದು ಮನೆಯಲ್ಲಿನ ಸಂಗೀತ, ಬೆಳಕು ಹಾಗೂ ತಾಪಮಾನದಿಂದ ತನ್ನ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶವನ್ನು ಹೊಂದಿದೆ.
ಹಾಲಿವುಡ್ ಬ್ಲಾಕ್‌ಬಸ್ಟರ್ ಚಿತ್ರ ‘ಅಯರ್ನ್ ಮ್ಯಾನ್’ ಬಳಸಿರುವ ‘ಎಐ ಬಟ್ಲರ್’ಗೆ ಸಮಾನವಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ತನ್ನ ಗುರಿಯಾಗಿದೆ ಎಂದು ಝುಕರ್‌ಬರ್ಗ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಬಳಕೆದಾರರಿಗೆ ಮೆಸೆಂಜರ್ ಆ್ಯಪ್ ಒದಗಿಸುವ ನಿಟ್ಟಿನಲ್ಲಿ ತಾನು ಈ ಹೊಸ ತಂತ್ರಜ್ಞಾನದ ಬಗ್ಗೆ ಯೋಚಿಸಿರುವುದಾಗಿ ಅವರು ಹೇಳಿದ್ದಾರೆ.
27 ವರ್ಷಗಳ ಬಳಿಕ ಭಾರತ-ನೇಪಾಳ ಬಸ್ ಸೇವೆ ಪುನರಾರಂಭ
ಕಠ್ಮಂಡು, ಜ.4: ಉತ್ತರಾಖಂಡ್‌ನ ಚಂಪಾವತ್ ಮೂಲಕ ಭಾರತ ಹಾಗೂ ನೇಪಾಳ ನಡುವಿನ ಮೈತ್ರಿ ಬಸ್ ಸೇವೆ 27 ವರ್ಷಗಳ ಬಳಿಕ ಮತ್ತೆ ಆರಂಭವಾಗಿದೆ.
ಈ ವಿಶೇಷ ಬಸ್ ಸೇವೆಯ ಭಾಗವಾಗಿ ಸೋಮವಾರದಿಂದ ನಿಯಮಿತವಾಗಿ ನೇಪಾಳದ ಕಾಂಚನಪುರದಿಂದ
ದಿಲ್ಲಿಯ ಆನಂದ್ ವಿಹಾರ್ ನಡುವೆ ಬಸ್‌ಗಳು ಓಡಾಡಲಿವೆ.
ಈ ಬಸ್‌ಗಳಲ್ಲಿ ಪ್ರಯಾಣಿಸಲು ಜನರು ಯಾವುದೇ ವಿಶೇಷ ದಾಖಲೆಗಳನ್ನು ಹೊಂದಿರಬೇಕಾದ ಅಗತ್ಯವಿರುವುದಿಲ್ಲ ಮತ್ತು ಈ ಬಸ್‌ಗಳಲ್ಲಿ ವೈಫೈ ಸಂಪರ್ಕ ಉಚಿತವಾಗಿ ಲಭ್ಯವಿದೆ.
ಕುಟುಂಬ ಹಾಗೂ ವ್ಯಾಪಾರವನ್ನು ಹೊಂದಿರುವ ಎರಡೂ ರಾಷ್ಟ್ರಗಳ ಜನರಿಗೆ ಇದರಿಂದ ಪರಸ್ಪರ ಸಂಪರ್ಕ ಸಾಧಿಸಲು ಸುಲಭವಾಗಲಿದೆ. ಭಾರತ-ನೇಪಾಳ ವ್ಯಾಪಾರ ಹಾಗೂ ಸಾಗಣೆ ಒಪ್ಪಂದದ ಹಿನ್ನೆಲೆಯಲ್ಲಿ 27 ವರ್ಷಗಳ ಹಿಂದೆ ಉಭಯ ರಾಷ್ಟ್ರಗಳ ನಡುವಿನ ಬಸ್‌ಯಾನ ರದ್ದುಗೊಂಡಿತ್ತು ಎಂದು ಉತ್ತರಾಖಂಡ್‌ನ ಬನ್‌ಬಸಾದಲ್ಲಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚೀನಾ: ಚೊಚ್ಚಲ ಭಯೋತ್ಪಾದನಾ ವಿರೋಧಿ ಕಾಲೇಜು ಸ್ಥಾಪನೆ
ಬೀಜಿಂಗ್, ಜ.4: ರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಭಯೋತ್ಪಾದನೆ ವಿರೋಧಿ ಕಾಲೋಜೊಂದನ್ನು ಸ್ಥಾಪಿಸಲು ಚೀನಾ ಚಿಂತನೆ ನಡೆಸಿದೆ. ರಾಷ್ಟ್ರವು ಇದೇ ಮೊದಲ ಬಾರಿಗೆ ವಿವಾದಾತ್ಮಕ ಭಯೋತ್ಪಾದನಾ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.
ವಾಯವ್ಯ ಚೀನಾದ ಶಾನ್‌ಕ್ಸಿ ಪ್ರಾಂತದಲ್ಲಿ ವಿನೂತನ ಕಾಲೇಜು ಸ್ಥಾಪನೆಗೊಳ್ಳಲಿದ್ದು, ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಪದವಿಗಳನ್ನು ನೀಡಲಿದೆ. ಸಂಶೋಧನಾ ವಿದ್ಯಾರ್ಥಿಗಳು ಕೂಡಾ ಪಾಲ್ಗೊಳ್ಳುವ ಮೂಲಕ ಈ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿ ಹೆಚ್ಚಿನ ಪರಿಣತಿಯನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭದ್ರತಾ ಪಡೆಗಳಿಗೆ ಹೆಚ್ಚಿನ ಅಧಿಕಾರ ನೀಡುವ ನೂತನ ಭಯೋತ್ಪಾದನೆ ನಿಗ್ರಹ ಕಾಯ್ದೆಯನ್ನು ಚೀನಾ ಇತ್ತೀಚೆಗೆ ಅಂಗೀಕರಿಸಿತ್ತು. ಭಯೋತ್ಪಾದನೆಗೆ ಸಂಬಂಧಿಸಿದ ವರದಿಗಾರಿಕೆಯಲ್ಲೂ ಮಾಧ್ಯಮಗಳ ಮೇಲೆ ಕೆಲವು ನಿರ್ಬಂಧಗಳನ್ನು ಹೊಸ ಕಾಯ್ದೆ ವಿಧಿಸಿದೆ.
ಜರ್ಮನಿ: ನಿರಾಶ್ರಿತರ ನಿವಾಸಕ್ಕೆ ಗುಂಡಿನ ದಾಳಿ
ಬರ್ಲಿನ್, ಜ.4: ಪಶ್ಚಿಮ ಜರ್ಮನಿಯಲ್ಲಿ ನಿರಾಶ್ರಿತ ವಲಸಿಗರ ನಿವಾಸವೊಂದರ ಮೇಲೆ ಸರಣಿ ಗುಂಡಿನ ದಾಳಿ ನಡೆದಿದ್ದು, ಓರ್ವ ನಿವಾಸಿಯು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಮಂಗಳವಾರ ನಸುಕಿನ ವೇಳೆ ನಡೆದಿರುವ ಈ ಘಟನೆಯ ಹೊಣೆ ಯಾರೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಬರ್ಲಿನ್‌ನ ಡ್ರೆಯಿಚ್‌ನಲ್ಲಿರುವ ನಿರಾಶ್ರಿತರ ಶಿಬಿರವೊಂದರ ಕಿಟಕಿಯ ಮೂಲಕ ಗುಂಡಿನ ಸುರಿಮಳೆಗೈಯಲಾಗಿದೆ ಮತ್ತು ಈ ಸಂದರ್ಭದಲ್ಲಿ ನಿದ್ರಾವಸ್ಥೆಯಲ್ಲಿದ್ದ ಓರ್ವನಿಗೆ ಗಾಯವಾಗಿದೆ ಎಂದು ವರದಿ ವಿವರಿಸಿದೆ.