ನೂತನ ಲೋಕಾಯುಕ್ತ ನೇಮಕಕ್ಕೆ ಸಭೆ: ನ್ಯಾ.ವಿಕ್ರಮ್‌ಜೀತ್ ಸೇನ್ ಪರ ಒಲವು
ಬೆಂಗಳೂರು, ಜ.4: ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ನ್ಯಾ.ವೈ.ಭಾಸ್ಕರ್ ರಾವ್ ರಾಜೀನಾಮೆಯಿಂದ ತೆರವಾಗಿರುವ ರಾಜ್ಯದ ಲೋಕಾಯುಕ್ತರ ಹುದ್ದೆಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾ.ವಿಕ್ರಮ್‌ಜೀತ್ ಸೇನ್ ಪರವಾಗಿ ವಿಪಕ್ಷಗಳ ಮುಖಂಡರು ಹಾಗೂ ಸಭಾಪತಿ ಒಲವು ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನೂತನ ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ಮೊದಲ ಸಭೆ ನಡೆಸಲಾಯಿತು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿಕ್ರಮ್‌ಜೀತ್‌ಸೇನ್, ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾ.ಎಸ್.ಆರ್.ನಾಯಕ್ ಹಾಗೂ ಹೈಕೋರ್ಟ್‌ನ ಹಾಲಿ ನ್ಯಾ.ಎನ್.ಕೆ.ಪಾಟೀಲ್ ಹೆಸರುಗಳು ಪ್ರಮುಖವಾಗಿ ಸಭೆಯಲ್ಲಿ ಚರ್ಚೆಗೆ ಬಂದಿದ್ದವು.
ಈ ಪೈಕಿ ರಾಜ್ಯ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿರುವ ವಿಕ್ರಮ್‌ಜೀತ್ ಸೇನ್ ಹೆಸರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ, ಸಭಾಪತಿ ಡಿ.ಎಚ್.ಶಂಕರಮೂರ್ತಿ, ಪ್ರತಿಪಕ್ಷಗಳ ಮುಖಂಡರಾದ ಜಗದೀಶ್‌ಶೆಟ್ಟರ್, ಈಶ್ವರಪ್ಪ ಪ್ರಸ್ತಾಪಿಸಿದ್ದಾರೆ.
ಆದರೆ, ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತ್ರ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್.ನಾಯಕ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಯಾವುದೇ ಸ್ಪಷ್ಟವಾದ ತೀರ್ಮಾನ ಕೈಗೊಳ್ಳಲಾಗಿಲ್ಲ.
ಮುಖ್ಯಮಂತ್ರಿಗೆ ಅಧಿಕಾರ: ನೂತನ ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೀಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳ ಮುಖಂಡರು ಹಾಗೂ ಸಭಾಪತಿಯವರು ನ್ಯಾ.ವಿಕ್ರಮ್‌ಜೀತ್ ಸೇನ್ ಹೆಸರನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದೇವೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ನ್ಯಾ.ಎಸ್.ಆರ್.ನಾಯಕ್ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದರು. ಆದುದರಿಂದ, ನೂತನ ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನವನ್ನು ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಲಾಗಿದೆ ಎಂದರು.
ಸಭೆಯಲ್ಲಿ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸ್ಪೀಕರ್ ಕಾಗೋಡು ತಿಮ್ಮಪ್ಪ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಉಪಸ್ಥಿತರಿದ್ದರು.







