ನೂರು ವರ್ಷಗಳ ದಾಖಲೆ ನುಚ್ಚುನೂರು

ಔಟಾಗದೆ 1,009 ರನ್; 117 ವರ್ಷಗಳ ದಾಖಲೆ ಮುರಿದ ಮುಂಬೈನ ಪೋರ
ಮುಂಬೈ,ಜ.5:ಕಲ್ಯಾಣ್‌ನ 15ರ ಹರೆಯದ ಶಾಲಾ ಬಾಲಕ ಪ್ರಣವ್ ಧನವಾಡೆ ಅವರು ಭಂಡಾರಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪಂದ್ಯದಲ್ಲಿ ಔಟಾಗದೆ 1,009 ರನ್ ದಾಖಲಿಸುವ ಮೂಲಕ 117 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ.
ಕೆ.ಸಿ. ಗಾಂಧಿ ಸ್ಕೂಲ್ ತಂಡದ ಆಟಗಾರ ಪಿ.ಧನವಾಡೆ ಅವರು ಆರ್ಯ ಗುರುಕುಲ ಸ್ಕೂಲ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಪ್ರಣವ್ ನಾಲ್ಕಂಕೆಯ ಸ್ಕೋರ್ ದಾಖಲಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
1899ರಲ್ಲಿ ಕ್ಲಾರ್ಕ್ಸ್ ಹೌಸ್ ತಂಡದ ಎಇಜೆ ಕಾಲಿನ್ಸ್ ಅವರು ನಾರ್ಥ್ ಟೌನ್ ವಿರುದ್ಧ ಪಂದ್ಯದಲ್ಲಿ ಔಟಾಗದೆ 628 ರನ್ ದಾಖಲಿಸಿದ್ದರು. ಕಲ್ಯಾಣ್‌ನ ಯೂನಿಯನ್ ಕ್ರಿಕೆಟ್ ಅಕಾಡಮಿ ಕ್ರೀಡಾಂಗಣದಲ್ಲಿ ಸೋಮವಾರ ಅಂಡರ್ -16 ಇಂಟರ್‌ಸ್ಕೂಲ್ ಪಂದ್ಯದಲ್ಲಿ ಪ್ರಣವ್ 1,000 ರನ್ ಗಳಿಸುವ ಮೂಲಕ ಹೊಸ ದಾಖಲೆ ಬರೆದರು. ಒಂದೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಅವರು 395 ನಿಮಿಷಗಳ ಬ್ಯಾಟಿಂಗ್‌ನಲ್ಲಿ 323 ಎಸೆತಗಳನ್ನು ಎದುರಿಸಿ 129 ಬೌಂಡರಿ ಮತ್ತು 59 ಸಿಕ್ಸರ್‌ಗಳ ಸಹಾಯದಿಂದ ಔಟಾಗದೆ 1,009 ರನ್ ದಾಖಲಿಸಿದರು. ಇವರ ಕೊಡುಗೆ ನೆರವಿನಲ್ಲಿ ಅವರ ತಂಡ 1,465 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಮೊದಲ ದಿನ ಪ್ರಣವ್ ಅವರು ದಾಖಲಿಸಿದ 652 ರನ್ ನೆರವಿನಲ್ಲಿ ಅವರ ಕೆ.ಸಿ. ಗಾಂಧಿ ಸ್ಕೂಲ್ ತಂಡ 1 ವಿಕೆಟ್ ನಷ್ಟದಲ್ಲಿ 956 ರನ್ ಗಳಿಸಿತ್ತು. ನ್ಯೂ ಸೌತ್‌ವೇಲ್ಸ್ ವಿರುದ್ಧ ವಿಕ್ಟೋರಿಯಾ ತಂಡ 1926ರಲ್ಲಿ 1,107 ರನ್ ಗಳಿಸಿತ್ತು. ಈ ದಾಖಲೆ ಇದೀಗ ಪತನಗೊಂಡಿದೆ.
10ನೆ ತರಗತಿಯ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪ್ರಣವ್ ಈ ಹಿಂದೆ ದಾಖಲಿಸಿದ ಗರಿಷ್ಠ ಸ್ಕೋರ್ ಔಟಾಗದೆ 152 ರನ್ ಮತ್ತು ಭಂಡಾರಿ ಟ್ರೋಫಿಯಲ್ಲಿ ಔಟಾಗದೆ 80 ರನ್‌ಗಳಾಗಿದ್ದವು.
‘‘ ನಾನು ಯಾವಾಗಲೂ ಬಿಗ್-ಹಿಟ್ಟರ್. ಬ್ಯಾಟಿಂಗ್ ಆರಂಭಿಸುವಾಗ ನನಗೆ ದಾಖಲೆಯ ಯೋಜನೆ ಇರಲಿಲ್ಲ. ನಾನು ಸಹಜ ಆಟ ಆಡಿದೆ. ಇದು ವಿಶ್ವದ ಗಮನ ಸೆಳೆಯಿತು ’’ ಎಂದು ದಾಖಲೆಯ ವೀರ ಪ್ರಣವ್ ಹೇಳುತ್ತಾರೆ.
ಅಟೋ ರಿಕ್ಷಾ ಚಾಲಕನ ಮಗ ಪ್ರಣವ್ ಐದರ ಹರೆಯಲ್ಲಿ ಕ್ರಿಕೆಟ್ ಆಡತೊಡಗಿದ್ದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪ್ರಣವ್‌ಗೆ ಮುಬೀನ್ ಶೇಖ್ ಕೋಚ್ ಆಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಂತೆ ಕ್ರಿಕೆಟ್‌ನಲ್ಲಿ ಎತ್ತರಕ್ಕೆ ಬೆಳೆಯುವುದು ಪ್ರಣವ್ ಕನಸಾಗಿದೆ.
ಪ್ರಣವ್ ದಾಖಲೆಯ ಆಟದ ಸುದ್ದಿ ಕೇಳಿ ತಂದೆ ಪ್ರಶಾಂತ್ ಕ್ರೀಡಾಂಗಣಕ್ಕೆ ಧಾವಿಸಿ ಬಂದರು. ‘‘ ನನಗೆ ಹಲವರು ಪ್ರಣವ್ ಸಾಧನೆಯ ಬಗ್ಗೆ ಕರೆ ಮಾಡಿದರು. ಕ್ರೀಡಾಂಗಣಕ್ಕೆ ಬಂದಾಗ ಆತನ ಸ್ಕೋರ್ 300 ಆಗಿತ್ತು. ಪ್ರಣವ್‌ನ ಬ್ಯಾಟಿಂಗ್ ನೋಡಿ ಖುಶಿಯಾಗಿದೆ ಎಂದು ಪ್ರಶಾಂತ್ ಹೇಳಿದರು.
ಗರಿಷ್ಠ ಸ್ಕೋರ್ ಸಾಧನೆ
*2016: ಪ್ರಣವ್ ಧನವಾಡ್ ಔಟಾಗದೆ 1,009 ರನ್ (ಕೆ.ಸಿ. ಗಾಂಧಿ ಸ್ಕೂಲ್)- ಆರ್ಯ ಗುರುಕುಲ ಸ್ಕೂಲ್ ವಿರುದ್ಧ ಪಂದ್ಯ
*1899: ಎಇಎಸ್ ಕಾಲಿನ್ಸ್ ಔಟಾಗದೆ 628 ರನ್(ಕ್ಲಾರ್ಕ್ಸ್ ಹೌಸ್)-ನಾರ್ಥ್ ಟೌನ್ ವಿರುದ್ಧ ಪಂದ್ಯ.
*1901-02: ಸಿ.ಜೆ. ಎಡ್ಡಿ 566 ರನ್(ಬ್ರೇಕ್-ಒ-ಡೇ)-ವೆಲ್ಲಿಂಗ್ಟನ್ ವಿರುದ್ಧದ ಪಂದ್ಯ.
*2013-14: ಪಿ.ಪಿ. ಶಾವ್546(ಸೈಂಟ್ ಫ್ರಾನ್ಸಿಸ್)-ರಿಝ್ವಿ.
*1933-34:ಡಿ.ಹವೆವಾಲಾ 515(ಬಿಬಿ ಆ್ಯಂಡ್‌ರೈಲ್ವೇಸ್)-ಸೈಂಟ್ ಜೇವಿಯರ್ ವಿರುದ್ಧದ ಪಂದ್ಯ.







