ಬೆಳ್ತಂಗಡಿ: ರೈತರಿಗೆ ವಿವಿಧ ಸೌಲಭ್ಯಗಳ ವಿತರಣೆ

ಬೆಳ್ತಂಗಡಿ: ಅನ್ನದಾತನಾದ ರೈತರಿಗೆ ಎಲ್ಲ ರೀತಿಯಲ್ಲಿಯೂ ನೆರವಾಗುವ ಕಾರ್ಯವನ್ನು ಮಾಡಬೇಕಾಗಿದೆ. ಸರಕಾರಗಳ ಕಾರ್ಯಕ್ರಮಗಳು ರೈತರಿಗೆ ತಲುಪುವಾಗ ಅದರಲ್ಲಿ ಅದು ಸರಿಯಾಗಿ ತಲುಪುತ್ತಿಲ್ಲ ಎಂಬ ದೂರುಗಳಿದ್ದು ಅದನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಅವರು ಹೇಳಿದರು.
ಅವರು ಕೃಷಿ ಇಲಾಖೆಯ ವತಿಯಿಂದ ಬೆಳ್ತಂಗಡಿಯಲ್ಲಿ ಇಂದು ವಿವಿಧ ಸೌಲಭ್ಯಗಳ ವಿತರಣೆಯನ್ನು ನೆರವೇರಿಸಿ ಮಾತನಾಡಿದರು. ಶಾಸಕರು ಈ ಸಂದರ್ಭದಲ್ಲಿ 5 ಪವರ್ ಟಿಲ್ಲರ್‌ಗಳನ್ನು ಹಾಗೂ ಒಂದು ಮಿನಿ ಟ್ರಾಕ್ಟರ್ ಅನ್ನು ವಿತರಿಸಿದರು. ಅಲ್ಲದೆ ಪಶ್ಚಿಮ ಘಟ್ಟ ಅಭಿವೃದ್ದಿ ಯೋಜನೆಯ ಅಡಿಯಲ್ಲಿ 125 ಮಂದಿ ಫಲಾನುಭಾವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಕೃಷಿ ಪ್ರಶಸ್ತಿ ವಿಜೇತ ಕೃಷಿಕ ತಣ್ಣೀರು ಪಂತ ನಿವಾಸಿ ಬಾಲಕೃಷ್ಣ ಶೆಟ್ಟಿ ತಾಲೂಕು ಮಟ್ಟದಲ್ಲಿ ಪ್ರಧಮ ಸ್ಥಾನ ಪಡೆದ ಶ್ಯಾಮಣ್ಣ ನಾಯಕ್, ಓಡಿಲ್ನಾಳ,ದಿತೀಯ ಸ್ಥಾನ ಪಡೆದ ಚೆನ್ನಪ್ಪ ಪೂಜಾರಿ ಮಿತ್ತಬಾಗಿಲು, ಹಾಗೂ ತೃತೀಯ ಸ್ಥಾನ ಪಡೆದ ಮುನಿರಾಜ ಹೆಗ್ಡೆ ನಾರಾವಿ ಅವರನ್ನು ಶಾಸಕರು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತು ಅಧ್ಯಕ್ಷೆ ಜಯಂತಿ ಪಾಲೇದು, ಕಳೆಂಜ ಗ್ರಾ ಪಂ ಅಧ್ಯಕ್ಷೆ ಶಾರದ, ಪುದುವೆಟ್ಟು ಗ್ರಾ.ಪಂ ಅಧ್ಯಕ್ಷೆ ನೀಲಮ್ಮ, ನೆರಿಯ ಗ್ರಾ.ಪಂ ಅಧ್ಯಕ್ಷೆ ಮಹಮ್ಮದ್, ನಿಡ್ಲೆ ಗ್ರಾ.ಪಂ ಅಧ್ಯಕ್ಷೆ ಶುಭ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





