ಪಾಕಿಸ್ತಾನಕ್ಕೆ ಲವ್‌ಲೆಟರ್ ಬೇಡ ಅಂದವರು ಮಾಡುತ್ತಿರುವುದೇನು? ಯು.ಟಿ.ಖಾದರ್ ಪ್ರಶ್ನೆ

ಮಂಗಳೂರು, ಜ.5: ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಬೇಕೇ ಹೊರತು ಲವ್ ಲೆಟರ್ ಬರೆಯುವುದಲ್ಲ ಎಂದಿದ್ದ ಪ್ರಸಕ್ತ ಭಾರತದ ಪ್ರಧಾನಿ ಮೋದಿಯರು ಮಾಡುತ್ತಿರುವುದೇನು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ಅಧಿಕಾರ ಇಲ್ಲದಿದ್ದಾಗ ಒಂದು ಮಾತನಾಡಿ, ಅಧಿಕಾರ ಇದ್ದಾಗ ಇನ್ನೊಂದು ರೀತಿಯಲ್ಲಿ ವರ್ತಿಸುವ ನರೇಂದ್ರ ಮೋದಿ ಧೋರಣೆ ಖಂಡನೀಯ. ಮುಂಬಯಿ ಧಾಳಿಯಲ್ಲಿ ಭಾಗಿಯಾದವರನ್ನು ಶಿಕ್ಷೆಗೆ ಒಳಪಡಿಸುವವರೆಗೆ ಪಾಕ್ ಜತೆ ಸಂಪರ್ಕ ಬೇಡ ಎಂದು ನಿರ್ಧಾರ ಆಗಿತ್ತು. ಇತರ ರಾಷ್ಟ್ರಗಳು ಕೂಡ ಪಾಕಿಸ್ತಾನದ ನಿಜಬಣ್ಣವನ್ನು ಅರಿತಿದ್ದವು. ಈ ಬಗ್ಗೆ ಪಾಕಿಸ್ತಾನ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಆದರೆ ಆಗ ಲವ್‌ಲೆಟರ್ ಬೇಡ ಅಂದವರು ಈಗ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದರ ಅರ್ಥವೇನು ಎಂದು ಖಾದರ್ ಪ್ರಶ್ನಿಸಿದರು.
ಈ ಹಿಂದೆ ವಾಜಪೇಯಿ ಪ್ರಧಾನಿ ಆಗಿದ್ದ ಸಂದರ್ಭ ಅವರು ಪಾಕಿಸ್ತಾನಕ್ಕೆ ತೆರಳಿದ 6 ತಿಂಗಳೊಳಗೆ ಕಾರ್ಗಿಲ್ ಯುದ್ದ ನಡೆದಿತ್ತು. ಆ ಬಳಿಕ ಭಾರತದಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡ ಆಟವಾಡಲೂ ಇಲ್ಲಿ ಆಕ್ಷೇಪ ವ್ಯಕ್ತವಾಗಿ ನಮ್ಮ ಪಿಚ್ ಕೂಡಾ ಹಾಳು ಮಾಡಲಾಗಿಲ್ಲ. ಪಿಚ್ ಹಾಳಾಗಿದ್ದು ನಮ್ಮದು. ಆದರೆ ಇವರು ಮಾತ್ರ ಪಾಕಿಸ್ತಾನಕ್ಕೆ ಹೋಗಿ ಚಹಾ ಕುಡಿದು ಬರುವುದು ಎಂದು ಪ್ರಧಾನಿ ನಿಲುವಿನ ಬಗ್ಗೆ ಸಚಿವ ಖಾದರ್ ವ್ಯಂಗ್ಯವಾಡಿದರು.





