ಸೈನಿಕರ ಫೋನ್ ನಂಬರ್ ಪಡೆಯಲು ಬಿಎಸ್ಸೆನ್ನೆಲ್‌ಗೆ ಐಎಸ್‌ಐ ಕರೆ
ಸೈನಿಕರ ಫೋನ್ ನಂಬರ್ ಪಡೆಯಲು ಬಿಎಸ್ಸೆನ್ನೆಲ್‌ಗೆ ಐಎಸ್‌ಐ ಕರೆ
ಜೈಸಲ್ಮೇರ್, ಜ. 5: ಕರೆ ಮಾಡಿದ ಯಾವುದೇ ವ್ಯಕ್ತಿಗೆ ಪರಿಶೀಲನೆ ನಡೆಸದೆ ತಮ್ಮ ಸಂಪರ್ಕ ವಿವರಗಳನ್ನು ನೀಡಬಾರದು ಎಂಬುದಾಗಿ ರಾಜಸ್ಥಾನದಲ್ಲಿನ ರಕ್ಷಣಾ ಸಂಸ್ಥೆಗಳ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ರಕ್ಷಣಾ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸರು ಸೂಚನೆ ನೀಡಿದ್ದಾರೆ.
ಇಂಟರ್ನೆಟ್ ಕರೆಗಳ ಮೂಲಕ ರಕ್ಷಣಾ ಸಂಸ್ಥೆಗಳ ವಿವರಗಳನ್ನು ಪಡೆಯಲು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಇತ್ತೀಚೆಗೆ ನಡೆಸಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಪೊಲೀಸರು ರಕ್ಷಣಾ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಇಂಟರ್ನೆಟ್ ಕರೆಗಳ ಮೂಲಕ ಭಾರತೀಯ ಸೇನೆಯ ಅಧಿಕಾರಿಗಳು ಮತ್ತು ಯೋಧರ ಲ್ಯಾಂಡ್‌ಲೈನ್ ಟೆಲಿಫೋನ್ ನಂಬರ್‌ಗಳನ್ನು ಇಲ್ಲಿನ ಬಿಸ್ಸೆನ್ನೆಲ್ ಕಚೇರಿಯ ಉದ್ಯೋಗಿಗಳಿಂದ ಪಡೆಯಲು ಯತ್ನಿಸಿತ್ತು.
ಕಳೆದ ವರ್ಷದ ಸೆಪ್ಟಂಬರ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಪೊಖ್ರಾನ್‌ನ ಫಲ್ಸೂಂಡ್‌ನಲ್ಲಿ ನಡೆದ ಸಮರಾಭ್ಯಾಸದ ವೇಳೆ ಇಂಥ ಕರೆಗಳು ಪಾಕಿಸ್ತಾನದಿಂದ ಇಲ್ಲಿನ ಬಿಸ್ಸೆನ್ನೆಲ್ ಕಚೇರಿಗೆ ಬಂದಿದ್ದವು.
ಪೊಖ್ರಾನ್ ಉಪವಿಭಾಗದಲ್ಲಿ ನಡೆದ ಸಮರಾಭ್ಯಸದ ವೇಳೆ ಇಲ್ಲಿನ ಸೇನಾ ಘಟಕಕ್ಕೆ ನೂತನ ಫೋನ್ ಸಂಖ್ಯೆಗಳನ್ನು ನೀಡಲಾಗಿತ್ತು ಎಂದು ಜಿಲ್ಲಾ ಟೆಲಿಕಾಂ ಅಧಿಕಾರಿ ಯೋಗೇಶ್ ಭಾಸ್ಕರ್ ತಿಳಿಸಿದರು. ಅದೇ ಅವಧಿಯಲ್ಲಿ, ಘಟಕದ ಅಧಿಕಾರಿಗಳು ಮತ್ತು ಯೋಧರ ಟೆಲಿಫೋನ್ ಬಿಲ್‌ಗಳ ಮಾಹಿತಿ ಕೋರಿ ಪಾಕಿಸ್ತಾನದಿಂದ ಕರೆಗಳು ಬಂದವು. ವಿವಿಧ ಸೇನಾ ನೆಲೆಗಳ ಟೆಲಿಫೋನ್ ಸಂಖ್ಯೆಗಳನ್ನೂ ಕರೆ ಮಾಡಿದಾತ ಕೇಳಿದನು. ಕರೆಗಳನ್ನು ವಾಸ್ತವವಾಗಿ ಪಾಕಿಸ್ತಾನದಿಂದ ಮಾಡಲಾಗಿದ್ದರೂ, ಹೊಸದಿಲ್ಲಿಯಿಂದ ಕರೆಗಳನ್ನು ಮಾಡಲಾಗಿದೆ ಎಂಬುದಾಗಿ ಕರೆ ಮಾಡಿದವರು ಪರಿಚಯಿಸಿಕೊಂಡಿದ್ದರು. ‘‘ಇಂಟರ್ನೆಟ್ ಕರೆ ಮಾಡುವ ಮೂಲಕ ಕರೆ ಮಾಡಿದವರು ತಮ್ಮ ಸ್ಥಳವನ್ನು ಮರೆಮಾಚಲು ಯತ್ನಿಸಿದ್ದರು. ಆದರೆ, ಅವರು ಕರೆ ಮಾಡಿದ ನಿಖರ ಸ್ಥಳವನ್ನು ನಾವು ಪತ್ತೆಹಚ್ಚಿದೆವು ಹಾಗೂ ಎಚ್ಚರಿಕೆ ಹೊರಡಿಸಿದೆವು’’ ಬಿಸ್ಸೆನ್ನೆಲ್ ಅಧಿಕಾರಿ ಹೇಳಿದರು.
ಆ ಸಮಯದಲ್ಲಿ ಕರೆಗಳನ್ನು ಪಾಕಿಸ್ತಾನದಿಂದ ಮಾಡಲಾಗಿತ್ತು ಎಂಬುದು ನಮಗೆ ತಿಳಿದಿರಲಿಲ್ಲ ಹಾಗೂ ಕರೆ ಸ್ವೀಕರಿಸಿದವರು ಒಂದೆರಡು ಫೋನ್ ಸಂಖ್ಯೆಗಳನ್ನು ಪಾಕಿಸ್ತಾನಕ್ಕೆ ನೀಡಿದ್ದರು ಎಂದರು. ‘‘ಬಳಿಕ, ಫೋನ್ ಕರೆ ಬಂದದ್ದು ಪಾಕಿಸ್ತಾನದಿಂದ ಎಂಬುದಾಗಿ ಗುಪ್ತಚರ ಸಂಸ್ಥೆ ನಮ್ಮನ್ನು ಎಚ್ಚರಿಸಿತು’’ ಎಂದು ಯೋಗೇಶ್ ಭಾಸ್ಕರ್ ಹೇಳಿದರು.
ಗಡಿಯಲ್ಲಿರುವ ಸೈನಿಕರಿಗೆ ಪಾಕಿಸ್ತಾನ ಕರೆಗಳನ್ನು ಮಾಡುತ್ತಿರುವುದು ಗಂಭೀರ ಸಮಸ್ಯೆಯಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಲೆ.ಕ. ಮನೀಶ್ ಓಝಾ ಹೇಳುತ್ತಾರೆ. ಸೈನಿಕರು ಮತ್ತು ಅವರ ಕುಟುಂಬ ಸದಸ್ಯರು ಕರೆಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದ ಅವರು, ಇಂಥ ಕರೆಗಳ ಬಲೆಗೆ ಬೀಳದೆ ಎಚ್ಚರಿಕೆ ವಹಿಸುವಂತೆ ಹಾಗೂ ಸೇನೆಯ ಬಗ್ಗೆ ಯಾವುದೇ ಮಾಹಿತಿ ನೀಡದಂತೆ ಅವರಿಗೆ ತಿಳಿ ಹೇಳಲಾಗಿದೆ ಎಂದರು.







