ಪಂಚಾಂಗ-ಕುಂಡಲಿಗಳೆಲ್ಲ ಸುಳ್ಳಿನ ಕಂತೆಗಳು: ಮುರುಘಾ ಶರಣರು

ಚಿತ್ರದುರ್ಗ, ಜ. 5: ಜಾತಕ ಮೀರಿ ಮದುವೆಯಾದರೆ ವಧು-ವರರಲ್ಲಿ ಯಾರಾದರೊಬ್ಬರು ಸಾಯುತ್ತಾರೆಂಬ ಮೂಢನಂಬಿಕೆ ಪ್ರಚಲಿತದಲ್ಲಿದೆ. ಆದರೆ, ಪಂಚಾಂಗ, ಜಾತಕ, ಕುಂಡಲಿಗಳೆಲ್ಲ ಅವೈಜ್ಞಾನಿಕ ಮತ್ತು ಸುಳ್ಳಿನ ಕಂತೆಗಳಾಗಿವೆ ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾಶರಣರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಬಸವಕೇಂದ್ರ ಮತ್ತು ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ವತಿಯಿಂದ ಶ್ರೀಮಠದಲ್ಲಿ ನಡೆದ 26ನೆ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರೀತಿಸುವಾಗ ಯಾವ ಜಾತಕವನ್ನೂ ನೋಡುವುದಿಲ್ಲ.
ಒಬ್ಬ ಯುವತಿ ತಾನು ಪ್ರೀತಿಸಿದ ಹುಡುಗನೊಟ್ಟಿಗೆ ಮದುವೆಯಾಗಲು ಇಚ್ಛಿಸಿದ್ದು, ಹುಡುಗನ ತಾಯಿ ಜಾತಕವನ್ನು ಮುಂದು ಮಾಡಿ ಒಪ್ಪದಿದ್ದಾಗ ಇದನ್ನು ಮೀರಿ ನಾನು ಹೇಗೆ ಹೊರಬರಬೇಕೆಂದು ನನ್ನ ಬಳಿಬಂದು ಅಲವತ್ತುಕೊಂಡಳು. ಆಗ ಯುವಕನ ತಾಯಿಯನ್ನು ಕರೆಸಿಕೊಂಡು ತಿಳಿಹೇಳಿ ಇದನ್ನು ಸುಖಾಂತ್ಯಗೊಳಿಸಿದೆವು ಎಂದು ನೆನಪಿಸಿಕೊಂಡರು.
ವಿದ್ಯಾವಂತ ವೈದ್ಯರು, ಎಂಜಿನಿಯರ್‌ಗಳು ಖಿನ್ನತೆಗೊಳಗಾಗಿ ಕೊನೆಗೆ ಅವರು ಸಾವಿಗೆ ಶರಣಾಗುತ್ತಾರೆ. ಪಂಚಾಂಗ, ಜಾತಕ, ಕುಂಡಲಿ ನೋಡಿ ಮದುವೆಯಾಗದೆ ದುಡಿಯುವ ಹುಡುಗ ಮತ್ತು ಅಡುಗೆ ಮಾಡುವ ಹುಡುಗಿಯನ್ನು ನೋಡಿ ಮದುವೆ ಮಾಡಿಕೊಳ್ಳಿ ಎಂದ ಅವರು, ಶ್ರೀಮಠದಲ್ಲಿ ಯಾವುದೇ ರಾಹುಕಾಲ-ಗುಳಿಗ ಕಾಲ, ಯಮಗಂಡ ಕಾಲ, ಜಾತಕ, ಕುಂಡಲಿ, ಪಂಚಾಂಗವನ್ನು ನೋಡದೆ ಇಪ್ಪತ್ತೈದು ವರ್ಷಗಳಿಂದ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಟಿ.ಆರ್.ಮಾರುತೇಶ (ನಾಯಕ), ಜಿ.ಸಿದ್ದವೀರಮ್ಮ (ಯಾದವ), ಆರ್.ತಿಮ್ಮಪ್ಪ(ಕೊರಚ), ಎನ್.ಲಕ್ಷ್ಮೀದೇವಿ(ನಾಯಕ) ಮತ್ತು ಜಿ.ಆರ್. ಮಂಜಪ್ಪ(ನಾಯಕ), ಜಿ.ಎಸ್.ಲಲಿತಾ(ಯಾದವ) ಮೂರು ಜೋಡಿ ಅಂತರ್ಜಾತಿ ವಿವಾಹ ಸೇರಿದಂತೆ 28 ಜೋಡಿಗಳು ನವದಾಂಪತ್ಯಜೀವನಕ್ಕೆ ಕಾಲಿರಿಸಿದರು.
ಚಿಕ್ಕಮಗಳೂರಿನ ಹಣ್ಣೆ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ವಿಶ್ವನಾಥ ಹೀರೆಮಠ, ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ರವಿಶಂಕರ್, ಆಹಾರ ತಜ್ಞ ಕೆ.ಸಿ.ರಘು, ವಕೀಲರ ಪರಿಷತ್ ಸದಸ್ಯ ಅನಿಲ್‌ಕುಮಾರ್ ಹಾಗೂ ದಾಸೋಹಿಗಳಾದ ಅಶ್ವತ್ಥಲಕ್ಷ್ಮೀ ಮತ್ತು ಸುಬ್ರಮಣ್ಯ ಶೆಟ್ಟಿ ದಂಪತಿ ವೇದಿಕೆಯಲ್ಲಿ ಹಾಜರಿದ್ದರು.





