ವಿಧಾನ ಪರಿಷತ್; ನೂತನ ಸದಸ್ಯರಿಗೆ ಇಂದು ಪ್ರಮಾಣ ವಚನ ಬೋಧನೆ
ಬೆಂಗಳೂರು, ಜ. 5: ಸ್ಥಳೀಯ ಸಂಸ್ಥೆಗಳಿಗೆ ಮೇಲ್ಮನೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡ ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ ಸೇರಿದಂತೆ 25ಮಂದಿ ನೂತನ ಸದಸ್ಯರು ಜ.6ರಂದು ಬೆಳಗ್ಗೆ 9ಗಂಟೆಗೆ ಇಲ್ಲಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನೂತನ ಸದಸ್ಯರಿಗೆ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂತಿ ಅವರು ‘ಅಧಿಕಾರ ಮತ್ತು ಗೌಪ್ಯತೆ’ಯ ಪ್ರಮಾಣ ವಚನ ಬೋಧಿಸಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ಸಿನ 13 ಮಂದಿ, ವಿಪಕ್ಷ ಬಿಜೆಪಿಯ 6, ಜೆಡಿಎಸ್-4 ಹಾಗೂ ಇಬ್ಬರು ಪಕ್ಷೇತರರು ಸೇರಿದಂತೆ ಒಟ್ಟು ಇಪ್ಪತ್ತೈದು ಮಂದಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಕಾಂಗ್ರೆಸ್ಸಿನ ವಿಜಯ್ ಸಿಂಗ್, ಆರ್.ಪ್ರಸನ್ನಕುಮಾರ್, ಎಂ.ಎ.ಗೋಪಾಲಸ್ವಾಮಿ, ಎಂ.ನಾರಾಯಣಸ್ವಾಮಿ, ಎಸ್.ರವಿ, ಬಿಜೆಪಿಯ ಜಿ.ಟಿ.ಪಾಟೀಲ, ಪ್ರದೀಪ್ ಶೆಟ್ಟರ್, ಎಂ.ಕೆ.ಪ್ರಾಣೇಶ್, ಎಂ.ಪಿ.ಸುನೀಲ್ ಸುಬ್ರಹ್ಮಣಿ, ಜೆಡಿಎಸ್‌ನ ಸಿ.ಆರ್. ಮನೋಹರ್, ಎನ್.ಅಪ್ಪಾಜಿಗೌಡ ಹಾಗೂ ಕಾಂತರಾಜ್ ಮೊದಲಬಾರಿಗೆ ಮೇಲ್ಮನೆ ಪ್ರವೇಶ ಮಾಡಲಿದ್ದಾರೆ.
ಅವರೊಂದಿಗೆ ಪಕ್ಷೇತರರಾಗಿ ಆಯ್ಕೆಗೊಂಡಿರುವ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್, ವಿವೇಕ್‌ರಾವ್ ವಸಂತರಾವ್ ನೂತನವಾಗಿ ವಿಧಾನ ಪರಿಷತ್ ಪ್ರವೇಶಿಸಲಿದ್ದಾರೆ.





