ಆದಿವಾಸಿ ಕ್ರೈಸ್ತರ ಕ್ರಿಸ್‌ಮಸ್‌ಗೆ ಕೇಸರಿ ಶಕ್ತಿಗಳ ಅಡ್ಡಿ;ಕಂದಮಾಲ್‌ನಲ್ಲಿ ಫ್ಯಾಶಿಸ್ಟ್ ಅಟ್ಟಹಾಸ

ಇಡೀ ವಿಶ್ವ ಶಾಂತಿ ಹಾಗೂ ಸಂತೋಷದಿಂದ ಕ್ರಿಸ್‌ಮಸ್ ಆಚರಿಸುತ್ತಿದ್ದರೆ, ಒಡಿಶಾದ ಕಂದಮಾಲ್ ಜಿಲ್ಲೆಯ ಆದಿವಾಸಿ/ ದಲಿತ ಕ್ರಿಶ್ಚಿಯನ್ನರಿಗೆ ಆ ರಾತ್ರಿ ಅಭದ್ರತೆ ಹಾಗೂ ಭೀತಿಯ ಕರಾಳರಾತ್ರಿಯಾಗಿತ್ತು. ಈ ಗುಡ್ಡಗಾಡು ಜಿಲ್ಲೆಯ ವಿವಿಧೆಡೆ, ಆರೆಸ್ಸೆಸ್/ಬಿಜೆಪಿಗೆ ಸೇರಿದ ಕೇಸರಿ ಫ್ಯಾಶಿಸ್ಟ್ ಶಕ್ತಿಗಳು, ಕ್ರಿಸ್‌ಮಸ್ ಆಚರಿಸದಂತೆ ಕ್ರಿಶ್ಚಿಯನ್ನರಿಗೆ ಎಚ್ಚರಿಕೆ ನೀಡಿದರು. ಈ ದೌರ್ಜನ್ಯದ ವೇಳೆ ಪೊಲೀಸರು ಬಾರದಂತೆ ತಡೆಯಲು ರಸ್ತೆಗಳ ಮೇಲೆ ಮರಗಳನ್ನು ಕಡಿದು ಹಾಕಿ ಹಾಗೂ ದೊಡ್ಡ ಕಲ್ಲುಗಳನ್ನು ಹಾಕಿ ವಾಹನ ಸಂಚಾರವನ್ನೂ ತಡೆದರು.
ತೀವ್ರ ತೊಂದರೆಗೀಡಾದ ಪ್ರದೇಶವೆಂದರೆ ಬಲ್ಲಿಗುಡದ ಬರ್ಖಾಮಾ ಗ್ರಾಮ. ಉಪವಿಭಾಗ ಕೇಂದ್ರವಾದ ಬಲ್ಲಿಗುಡದಿಂದ 13 ಕಿಲೋಮೀಟಿರ್ ದೂರದಲ್ಲಿ ಈ ಗ್ರಾಮವಿದೆ. ರಸ್ತೆ ತಡೆಗಳನ್ನು ನಿರ್ಮಿಸಲಾಗಿದೆ ಹಾಗೂ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಆರೆಸ್ಸೆಸ್/ಬಿಜೆಪಿ ಬೆಂಬಲಿಗರು ಗುಂಪುಸೇರಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಕ್ರಿಸ್‌ಮಸ್ ಸಂಭ್ರಮದಲ್ಲಿದ್ದ ಜನತೆ ಭೀತಿಯಿಂದ ತತ್ತರಿಸಿದರು. ಈ ಭೀತಿಯಿಂದಾಗಿ ಕ್ರಿಶ್ಚಿಯನ್ ಮುಖಂಡರು, ಕ್ರಿಸ್‌ಮಸ್ ಆಚರಣೆಗೆ ಪೊಲೀಸ್ ಹಾಗೂ ವಿಶೇಷ ಪಡೆಗಳನ್ನು ನಿಯೋಜಿಸುವಂತೆ ಕೋರಿದರು. ಅವರು ರಸ್ತೆ ತಡೆಯನ್ನೇನೋ ತೆರವುಗೊಳಿಸಿದರು. ಆದರೆ ಕ್ರಿಸ್‌ಮಸ್ ಆಚರಣೆಗೆ ಕ್ರೈಸ್ತರು ಚರ್ಚ್‌ಗಳಿಗೆ ತೆರಳಲು ಅವಕಾಶ ನೀಡಲಿಲ್ಲ.
ಈ ಘಟನೆ ಬಾರ್ಖಾಮಾದ ಅನುಭವವಷ್ಟೇ ಅಲ್ಲ. ಜಿಲ್ಲೆಯ ಹಲವು ಕಡೆಗಳಲ್ಲಿ ಕ್ರಿಸ್‌ಮಸ್ ದಿನದಂದು ಆರೆಸ್ಸೆಸ್/ ಬಿಜೆಪಿ ಬೆಂಬಲಿಗರು ಬಂದ್ ಕರೆ ನೀಡಿದ್ದರು. ಟಿಕಬಾಲಿ, ಸಂಕರಖೋಲ್, ಸರಂಗಡ, ಬರ್ಖಾಮಾ ಸೇರಿದಂತೆ ಹಲವು ನಗರಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು ಹಾಗೂ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಇದು ಸ್ವಂತ ವಾಹನಗಳನ್ನು ಹೊಂದಿರದ ಬಡ ಆದಿವಾಸಿ ಹಾಗೂ ದಲಿತ ಕ್ರೈಸ್ತರಿಗೆ ಅಡ್ಡಿ ಉಂಟುಮಾಡಿತು.
ಆದಿವಾಸಿ ಸಂಘಟನೆ ‘ಕ್ಯೂ ಸಮಾಜ ಸಮನ್ವಯ ಸಮಿತಿ’ ಈ ಬಂದ್‌ನ ನೇತೃತ್ವ ವಹಿಸಿತ್ತು. ಕೇಸರಿ ಶಕ್ತಿಗಳು ಸಂಪೂರ್ಣ ಬೆಂಬಲ ಘೋಷಿಸಿದ್ದವು. ಇದೇ ಸಂಘಟನೆ 2007ರ ಕ್ರಿಸ್‌ಮಸ್ ಸಂದರ್ಭದಲ್ಲೂ ಬಂದ್‌ಗೆ ಕರೆ ನೀಡಿತ್ತು. ಇದು 2008ರಲ್ಲಿ ಜಿಲ್ಲೆಯಲ್ಲಿ ಕ್ರೈಸ್ತವಿರೋಧಿ ಹಿಂಸಾಚಾರ ಭುಗಿಲೇಳಲೂ ಕಾರಣವಾಗಿತ್ತು. ಇದು 300 ವರ್ಷಗಳಲ್ಲೇ ಭಾರತದಲ್ಲಿ ಕ್ರೈಸ್ತರ ವಿರುದ್ಧ ನಡೆದ ಅತ್ಯಂತ ಭೀಕರ ಕೋಮು ಹಿಂಸಾಚಾರವಾಗಿತ್ತು. 2007ರ ಕ್ರಿಸ್‌ಮಸ್‌ಗೆ ತಡೆ ಉಂಟು ಮಾಡಿದ ಬಳಿಕ, 2008ರ ಕ್ರಿಸ್‌ಮಸ್‌ನಂದು ಇದನ್ನು ಕ್ರೈಸ್ತರ ವಿರುದ್ಧದ ಸುಸಜ್ಜಿತ ಕಾರ್ಯಕ್ರಮವಾಗಿ ಮಾಡಿಕೊಂಡಿತು. ಆ ದಿನ ಕೇಸರಿ ಫ್ಯಾಶಿಸ್ಟ್ ಶಕ್ತಿಗಳು ಕಂದಮಾಲ್‌ನಲ್ಲಿ ಅಲ್ಪಸಂಖ್ಯಾತ ಕ್ರೈಸ್ತರ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆಸಿತು. ನಾಲ್ಕು ದಿನಗಳ ಕಾಲ ಹಿಂದುತ್ವ ಶಕ್ತಿಗಳ ಆಕ್ರೋಶ ಹಾಗೂ ಹಿಂಸಾಚಾರ ಮುಂದುವರಿದು, 90 ಕ್ರೈಸ್ತರನ್ನು ಬಲಿ ತೆಗೆದುಕೊಂಡಿತು. ಹತ್ತಾರು ಮಂದಿ ಕ್ರೈಸ್ತರು ನಾಪತ್ತೆಯಾಗಿ, ಮತ್ತೆಂದೂ ಕಾಣಿಸಿಕೊಳ್ಳಲೇ ಇಲ್ಲ. ನಾಲ್ಕು ತಿಂಗಳ ವರೆಗೆ ಹಿಂಸಾಚಾರ ಮುಂದುವರಿದು ಆದಿವಾಸಿ ದಲಿತ ಕ್ರೈಸ್ತರಿಗೆ ಸೇರಿದ 350ಕ್ಕೂ ಹೆಚ್ಚು ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳನ್ನು ಧ್ವಂಸ ಮಾಡಲಾಯಿತು. 6,500ಕ್ಕೂ ಹೆಚ್ಚು ಮನೆಗಳನ್ನು ಸುಟ್ಟುಹಾಕಲಾಯಿತು. 40ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಅವಮಾನಕರ ಕೃತ್ಯಗಳು ನಡೆದವು. ಹಲವು ಶೈಕ್ಷಣಿಕ, ಸಮಾಜಸೇವೆ ಹಾಗೂ ಆರೋಗ್ಯಸಂಸ್ಥೆಗಳನ್ನು ಧ್ವಂಸ ಮಾಡಿ ಲೂಟಿ ಮಾಡಲಾಯಿತು. ಇದರಿಂದಾಗಿ 56 ಸಾವಿರ ಮಂದಿ ನಿರಾಶ್ರಿತರಾದರು. ಈ ಹಿಂಸಾಚಾರದ ವೇಳೆ ಹಲವು ಮಂದಿಯನ್ನು ಬಲಾತ್ಕಾರದಿಂದ ಹಿಂದುತ್ವಕ್ಕೆ ಮತಾಂತರ ಮಾಡಲಾಯಿತು. ಒಬ್ಬ ಕ್ರೈಸ್ತ ಸನ್ಯಾನಿಸಿಯನ್ನು 300ಕ್ಕೂ ಅಧಿಕ ಮಂದಿ ಇದ್ದ ಗುಂಪಿನ ಎದುರಲ್ಲೇ ಅತ್ಯಾಚಾರ ಮಾಡಲಾಯಿತು. ಇದಕ್ಕೆ ಎಂಟು ಮಂದಿ ಪೊಲೀಸರೂ ಮೂಕಸಾಕ್ಷಿಯಾದರು. ಈ ಸನ್ಯಾಸಿನಿ ಪೊಲೀಸರ ಮೊರೆ ಹೋದರೂ, ಅವರು ಘಟನೆಯನ್ನು ನೋಡುತ್ತಾ ನಿಂತರೇ ವಿನಃ ಸಹಾಯಕ್ಕೆ ಮುಂದಾಗಲಿಲ್ಲ. ಇವೆಲ್ಲ ನಡೆದದ್ದು ನವಗಾಂವ್ ಪೊಲೀಸ್ ಠಾಣೆಯಿಂದ ಅನತಿ ದೂರದಲ್ಲಿ.
ಈ ಘಟನೆ ನಡೆದು ಎಂಟು ವರ್ಷವಾಗಿದೆ. ಇದೀಗ ಅದೇ ಸಂಘಟನೆ ಕ್ರಿಸ್‌ಮಸ್ ದಿನ ಬಂದ್‌ಗೆ ಕರೆ ನೀಡಿ, ಕಂದಮಾಲ್ ಕ್ರೈಸ್ತ ಸಮುದಾಯದ ಭೀತಿಗೆ ಕಾರಣವಾಗಿತ್ತು. ಇದಕ್ಕೂ ಮುನ್ನ ಕ್ಯೂ ಸಮಾಜ ಸಮನ್ವಯ ಸಮಿತಿ ಆರೆಸ್ಸೆಸ್/ಬಿಜೆಪಿ ಬೆಂಬಲಿತ ಸಂಸ್ಥೆ ಎನ್ನುವ ಸುಳಿವು ಕಂದಮಾಲ್‌ನ ಜನರಿಗೆ ಸಿಕ್ಕಿತ್ತು. ಆದರೆ ಈ ಆರೋಪವನ್ನು ಸಂಘಟನೆ ಮುಖಂಡರು ನಿರಾಕರಿಸುತ್ತಿದ್ದರು. ಈಗ ಆ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ.
ಕಂದಮಾಲ್ ಕ್ರೈಸ್ತ ಸಮುದಾಯ ಆಳವಾದ ಯಾತನೆಯಲ್ಲಿದೆ. ಬರ್ಖಾಮಾ ಗ್ರಾಮದ ಯುವಮುಖಂಡ ಕಾರ್ತಿಕ್ ನಾಯಕ್ ಹೇಳುವಂತೆ, ‘‘ನಾವು ಕ್ರಿಸ್‌ಮಸ್ ಆಚರಿಸಲು ಸಾಧ್ಯವಾಗಲಿಲ್ಲ. ಶಾಂತಿ- ಸಂತೋಷದ ಜಾಗದಲ್ಲಿ ಭೀತಿ ಹಾಗೂ ಅಭದ್ರತೆಯಿಂದ ಇರಬೇಕಾಯಿತು. ಇದು 350ಕ್ಕೂ ಹೆಚ್ಚು ಕ್ರೈಸ್ತರು ಇರುವ ಗ್ರಾಮದ ಮೇಲಿನ ಮೂರನೆ ದೊಡ್ಡ ದಾಳಿ. ಮೊದಲ ದಾಳಿಯಲ್ಲಿ ನಾವು ಮನೆಗಳನ್ನು ಕಳೆದುಕೊಂಡೆವು ಹಾಗೂ ಹಲವು ಮಂದಿ ಗಾಯಗೊಂಡರು. ಎರಡನೆ ದಾಳಿಯಲ್ಲಿ ಇಬ್ಬರು ಸಮಾಜಬಾಂಧವರು ಜೀವ ಕಳೆದುಕೊಂಡರು ಹಾಗೂ ದಾಳಿಕೋರರು ಯಾವ ಮನೆಗಳನ್ನೂ ಬಿಡದೇ ಭಸ್ಮ ಮಾಡಿದರು. ವಿಶೇಷ ಭದ್ರತಾ ಪಡೆ ಇದ್ದರೂ, ಆರೆಸ್ಸೆಸ್ ನಮ್ಮ ಮೇಲೆ ದಾಳಿ ಮಾಡಿ ಇಬ್ಬರನ್ನು ಬಲಿ ಪಡೆಯಿತು. ಮಹಿಳೆಯರ ಮೇಲೂ ದಾಳಿ ನಡೆಯಿತು. ಮತ್ತೆ ದಾಳಿಯ ಯೋಜನೆ ರೂಪಿಸುತ್ತಿದ್ದಾರೆ. ನಮ್ಮ ಭವಿಷ್ಯ ಏನಾಗಬಹುದೋ ಎನ್ನುವುದು ನಮಗೇ ಗೊತ್ತಿಲ್ಲ. ನಾವು ಭೀತರಾಗಿದ್ದು, ನಮ್ಮ ಜೀವ ಹಾಗೂ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯಾಡಳಿತಕ್ಕೆ ಮನವಿ ಮಾಡಿಕೊಂಡಿದ್ದೇವೆ’’
1987ರ ಬಳಿಕ ಕ್ರೈಸ್ತರ ಮೇಲೆ ನಡೆಯುತ್ತಿರುವ ಪ್ರತಿ ದಾಳಿ ಸಂದರ್ಭದಲ್ಲಿ ಕೂಡಾ ಪೊಲೀಸರು ಸ್ಥಳಕ್ಕೆ ಸಕಾಲದಲ್ಲಿ ಆಗಮಿಸಲು ಸಾಧ್ಯವಾಗದಂತೆ ಮರಗಳನ್ನು ರಸ್ತೆಗೆ ಉರುಳಿಸಿ ತಡೆ ಒಡ್ಡಲಾಗುತ್ತಿತ್ತು.
‘ಕಂದಮಾಲ್‌ನಲ್ಲಿ ಶಾಂತಿಯುತ ಕ್ರಿಸ್‌ಮಸ್’ ಎಂಬ ಶೀರ್ಷಿಕೆ ನೀಡುವ ಮುಖ್ಯವಾಹಿನಿಯ ಪತ್ರಿಕೆಗಳು, ಕ್ರೈಸ್ತರನ್ನು ಪ್ರಾರ್ಥನೆಗೆ ಹೋಗದಂತೆ ತಡೆಯುವ ರಸ್ತೆ ತಡೆ, ಭೀತಿ ಹಾಗೂ ಅಭದ್ರತೆಯ ಬಗ್ಗೆ ವರದಿ ಮಾಡಬೇಕಿದೆ. ‘‘ದ ಹಿಂದೂ ಪತ್ರಿಕೆ ಕೂಡಾ, ಯಾವುದೇ ಅಹಿತಕರ ಘಟನೆ ಅಥವಾ ರಸ್ತೆ ತಡೆಯಂಥ ಘಟನೆಗಳು ಜಿಲ್ಲೆಯ ಯಾವ ಭಾಗದಲ್ಲೂ ನಡೆದಿಲ್ಲ ಎಂದು ವರದಿ ಮಾಡಿದೆ’’ ಎಂದು ಕಂದಮಾಲ್ ಎಸ್ಪಿ ಕನ್ವರ್ ವಿಶಾಲ್ ಸಿಂಗ್ ಹೇಳುತ್ತಾರೆ. ನಂತರ ಜಿಲ್ಲೆಯ ಯಾವುದೇ ಭಾಗಗಳಿಂದ ಇಂಥ ಘಟನೆಗಳ ಬಗ್ಗೆ ವರದಿಯಾಗಿಲ್ಲ ಎಂದು ಅವರು ಹೇಳಿಕೊಂಡರು. ‘‘ಕ್ರಿಸ್‌ಮಸ್ ನಂತರ ಕೂಡಾ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 1,000ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದಕ್ಕೆ ಹೊರತಾಗಿ ಜಿಲ್ಲೆಯ ತೀರಾ ಹಳ್ಳಿಗಳಲ್ಲಿ ವಿಶೇಷ ಕಾರ್ಯಾಚರಣೆ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ’’ ಎಂದು ವಿವರಿಸಿದರು.
ಆದರೆ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಹಾಗೂ ವಿಶೇಷ ಪಡೆಗಳನ್ನು ನಿಯೋಜಿಸಿದ ಹೊರತಾಗಿಯೂ ಫ್ಯಾಶಿಸ್ಟ್ ಶಕ್ತಿಗಳು ಬಸ್ಸುಗಳನ್ನು ರಸ್ತೆಗಿಳಿಯದಂತೆ ಹಾಗೂ ಅಂಗಡಿಗಳು ತೆರೆಯದಂತೆ ನೋಡಿಕೊಂಡವು. ಇದು ಕಂದಮಾಲ್‌ನಲ್ಲಿ ಪರಿಸ್ಥಿತಿ ಎಷ್ಟರ ಮಟ್ಟಿಗೆ ಬಿಗುವಿನಿಂದ ಕೂಡಿತ್ತು ಎನ್ನುವುದಕ್ಕೆ ಕನ್ನಡಿ. ಸಹಜ ಸ್ಥಿತಿ ಇದೆ ಎಂದು ಜಿಲ್ಲಾಡಳಿತ ಹೇಳಿಕೊಳ್ಳುವ ಬದಲಾಗಿ, ಇದನ್ನು ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಬಿಜೆಪಿ ತನ್ನ ಜಾತಿ ಹಾಗೂ ಕೋಮು ರಾಜಕೀಯವನ್ನು ದಾಳವಾಗಿ ಬಳಸಿಕೊಳ್ಳದಂತೆ ತಡೆಯಲು ಮುಂದಾಗಬೇಕು. 2008ರ ಕಂದಮಾಲ್ ಘಟನೆ ಮರುಕಳಿಸದಂತೆ ಆಗಬೇಕಾದರೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಬರ್ಖಾಮಾ ಗ್ರಾಮದ ಕ್ರೈಸ್ತರು ಈ ಸಂಬಂಧ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ಗೆ ಮನವಿ ಸಲ್ಲಿಸಿ, ರಕ್ಷಣೆ ನೀಡುವಂತೆ ಹಾಗೂ ಶಾಂತಿಯುತ ಸಹಬಾಳ್ವೆಗೆ ಅವಕಾಶ ಕಲ್ಪಿಸುವಂತೆ ಕೋರಿದ್ದಾರೆ.







