ಪಠಾಣ್‌ಕೋಟ್ ದಾಳಿ: ಅಧಿಕಾರಿಯ ಮೇಲೆ ಸಂಶಯದ ಕಣ್ಣು

ಚಂಡೀಗಢ, ಜ.5: ಪಠಾಣ್‌ಕೋಟ್ ವಾಯುಪಡೆ ನೆಲೆಯ ಮೇಲೆ ನಡೆದ ಬೃಹತ್ ಭಯೋತ್ಪಾದಕ ದಾಳಿಗೆ ಕಾರಣವಾದ ಭದ್ರತಾ ಲೋಪಗಳ ಕೇಂದ್ರ ಭಾಗದಲ್ಲಿ ನಿಂತಿರುವುದು ಭಯೋತ್ಪಾದಕರಿಂದ ಅಹಪರಣಕ್ಕೊಳಗಾದ ಹಿರಿಯ ಪೊಲೀಸ್ ಅಧಿಕಾರಿ. ಪೊಲೀಸರ ಸಂಶಯದ ನೋಟ ಅವರ ಮೇಲೆ ನೆಟ್ಟಿದೆ.
ಡಿಸೆಂಬರ್ 31ರ ರಾತ್ರಿ ಪೊಲೀಸ್ ಸೂಪರಿಂಟೆಂಡೆಂಟ್ ಸಲ್ವಿಂದರ್ ಸಿಂಗ್ ಇತರ ಇಬ್ಬರೊಂದಿಗೆ ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಮಂದಿರವೊಂದಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ಬಳಿಕ ಅವರು ತನ್ನ ವಾಹನದಲ್ಲಿ ವಾಪಸಾಗುತ್ತಿದ್ದರು. ಅವರು ಸಮವಸ್ತ್ರದಲ್ಲಿ ಇರಲಿಲ್ಲ. ಆದರೆ ತನ್ನ ಅಧಿಕೃತ ಕಾರನ್ನು ಪ್ರಯಾಣದಲ್ಲಿ ಬಳಸಿದ್ದರು.
ಆ ಸಮಯದಲ್ಲಿ ಅವರ ವಾಹನದ ಗೂಟದ ನೀಲಿ ದೀಪ ಚಾಲನೆಯಲ್ಲಿರಲಿಲ್ಲ ಎನ್ನಲಾಗಿದೆ. ಗೂಟದ ದೀಪ ಚಾಲನೆಯಲ್ಲಿದ್ದರೆ ಯಾವುದೇ ಸಂಚಾರ ತಡೆ ಇಲ್ಲದೆ ವಾಹನ ಸಾಗಬಹುದಾಗಿದೆ.
‘‘ಅವರಲ್ಲಿ ಎಕೆ-47 ರೈಫಲ್‌ಗಳಿದ್ದವು ಹಾಗೂ ಪಂಜಾಬಿ, ಹಿಂದಿ ಮತ್ತು ಉರ್ದು ಮಾತನಾಡುತ್ತಿದ್ದರು’’ ಎಂದು ಅಪಹರಣಕ್ಕೊಳಗಾಗಿ ಬಿಡುಗಡೆಯಾಗಿರುವ ಸಲ್ವಿಂದರ್ ಸಿಂಗ್ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಯನ್ನು ಕೇಂದ್ರೀಯ ತನಿಖಾಧಿಕಾರಿಗಳು ಸೋಮವಾರ ಆರು ತಾಸು ವಿಚಾರಣೆಗೊಳಪಡಿಸಿದ್ದು, ಅವರ ಹೇಳಿಕೆಗಳಲ್ಲಿ ವೈರುಧ್ಯಗಳಿವೆ ಎಂಬ ವರದಿಗಳನ್ನು ಇಲ್ಲಿ ಸ್ಮರಿಸಬಹುದಾಗಿದೆ.
‘‘ನಾನು ಹೇಳಿರುವುದರಲ್ಲಿ ಯಾವುದೇ ಸಂಶಯಾಸ್ಪದ ಅಂಶವಿಲ್ಲ. ನಾನು ಜೀವಂತವಾಗಿರುವುದೇ ನನ್ನ ತಪ್ಪೇ? ನಾನು ಏನಾದರೂ ತಪ್ಪು ಮಾಡಿದ್ದರೆ ನನ್ನನ್ನು ಗಲ್ಲಿಗೇರಿಸಿ. ನಾನು ದೇವರಿಗೆ ಹೆದರುವ ವ್ಯಕ್ತಿ’’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ತನ್ನ ಕಾರನ್ನು ಅಪಹರಿಸಿದ ಬಳಿಕ, ತನ್ನ ಕೈಗಳು ಮತ್ತು ಕಾಲುಗಳನ್ನು ಕಟ್ಟಿ ಹಾಕಲಾಯಿತು ಹಾಗೂ ಬಾಯಿ ಮತ್ತು ಕಣ್ಣುಗಳಿಗೆ ಪಟ್ಟಿ ಕಟ್ಟಲಾಯಿತು ಎಂದರು. ‘‘ಆಗ ಅಲ್ಲಿ ಕತ್ತಲೆಯಿತ್ತು. ಅಲ್ಲಿ ಎಷ್ಟು ಜನರಿದ್ದರು ಎಂದು ಲೆಕ್ಕ ಮಾಡುವುದು ಕಷ್ಟವಾಗಿತ್ತು’’ ಎಂದರು. ಎಷ್ಟು ಭಯೋತ್ಪಾದಕರು ಇದ್ದರು ಎಂಬ ಕುರಿತ ತನ್ನ ಗೊಂದಲದ ಹೇಳಿಕೆಗಳಿಗೆ ಇದೇ ಕಾರಣವಾಗಿತ್ತು ಎಂದು ಪೊಲೀಸ್ ಅಧಿಕಾರಿ ನುಡಿದರು.
ಆರು ಭಯೋತ್ಪಾದಕರು ಎರಡು ಗುಂಪುಗಳಲ್ಲಿ ಪ್ರವೇಶಿಸಿದರು ಎಂಬುದಾಗಿ ಗುಪ್ತಚರ ಅಧಿಕಾರಿಗಳು ಭಾವಿಸಿದ್ದಾರೆ.
‘‘ನಾನೋರ್ವ ಪೊಲೀಸ್ ಅಧಿಕಾರಿ ಎನ್ನುವುದು ಅವರಿಗೆ ಗೊತ್ತಿರಲಿಲ್ಲ’’ ಎಂದು ತನ್ನನ್ನು ಭಯೋತ್ಪಾದಕರು ಯಾಕೆ ಕೊಲ್ಲಲಿಲ್ಲ ಎಂಬುದಕ್ಕೆ ವಿವರಣೆ ಎಂಬಂತೆ ಸಲ್ವಿಂದರ್ ಸಿಂಗ್ ಹೇಳಿದರು. ‘‘ನಾನು ಯಾರೆಂದು ಅವರಿಗೆ ಗೊತ್ತಾದಾಗ ನನ್ನನ್ನು ಕೊಲ್ಲುವುದಕ್ಕಾಗಿ ಅವರು ವಾಪಸ್ ಬಂದರು. ಯಾರಿಗಾದರೂ ಮಾಹಿತಿ ನೀಡಲು ಪ್ರಯತ್ನಿಸಿದರೆ ನಾನು ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು’’ ಎಂದರು.
ತನ್ನ ಮೂರು ಮೊಬೈಲ್ ಫೋನ್‌ಗಳ ಪೈಕಿ ಎರಡನ್ನು ಭಯೋತ್ಪಾದಕರು ಕಸಿದುಕೊಂಡರು ಎಂದು ಸಲ್ವಿಂದರ್ ತಿಳಿಸಿದರು. ತನ್ನ ಅಂಗರಕ್ಷಕನು ಭಯೋತ್ಪಾದಕರ ಬಳಿಯಿದ್ದ ಮೊಬೈಲ್‌ಗೆ ಕರೆ ಮಾಡಿದಾಗಲಷ್ಟೆ ತಾನು ಪೊಲೀಸ್ ಎನ್ನುವುದು ಅವರಿಗೆ ಗೊತ್ತಾಯಿತು ಎಂದರು. ಬಳಿಕ ಚೆಕ್ ಪೋಸ್ಟ್ ಒಂದರಲ್ಲಿದ್ದ ಸಿಬ್ಬಂದಿ, ಭಯೋತ್ಪಾದಕರು ಪ್ರಯಾಣಿಸುತ್ತಿದ್ದ ಕಾರು ಪೊಲೀಸ್ ವಾಹನ ಎಂಬುದಾಗಿ ಖಚಿತಪಡಿಸಿದರು ಎಂದು ಅವರು ಹೇಳಿದರು.
ಬಳಿಕ ಹೇಗೋ ತಪ್ಪಿಸಿಕೊಳ್ಳುವಲ್ಲಿ ತಾನು ಯಶಸ್ವಿಯಾದೆ ಹಾಗೂ ಸಮೀಪದ ಗ್ರಾಮವೊಂದಕ್ಕೆ ನಡೆದುಕೊಂಡು ಹೋದೆ ಎಂದರು. ಅಲ್ಲಿಂದ ತನ್ನ ಮೂರನೆ ಸೆಲ್ ಫೋನನ್ನು ಬಳಸಿ ಶುಕ್ರವಾರ ಮುಂಜಾನೆಯ ಹೊತ್ತಿಗೆ ಹಿರಿಯ ಅಧಿಕಾರಿಗೆ ಮಾಹಿತಿ ನೀಡಿದೆ ಎಂದರು.
ದಾಖಲೆ ಉತ್ತಮವಾಗಿಲ್ಲ
ಘಟನೆಗೆ ಪ್ರತಿಕ್ರಿಯಿಸಿದ ಪಂಜಾಬ್‌ನ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು, ‘’ಸಲ್ವಿಂದರ್ ಸಿಂಗ್‌ರ ದೂರನ್ನು ನಾವು ಗಂಭೀರವಾಗಿ ಪರಿಗಣಿಸಲಿಲ್ಲ. ಯಾಕೆಂದರೆ ಅವರ ದಾಖಲೆ ಉತ್ತಮವಾಗಿಲ್ಲ’’ ಎಂದರು.







