ಯಡಿಯೂರಪ್ಪ ವಿರುದ್ಧದ 15 ಪ್ರಕರಣಗಳು ರದ್ದು

ಬೆಂಗಳೂರು, ಜ.5: ರಾಜ್ಯ ರಾಜಕೀಯದ ಮಹತ್ವಾಕಾಂಕ್ಷೆಯಲ್ಲಿ ಮಿಂದೇಳುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೇಲಿನ 15 ಡಿನೋಟಿಫಿಕೇಶನ್ ಪ್ರಕರಣಗಳನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದ್ದು, ಈ ಬೆಳವಣಿಗೆಯಿಂದಾಗಿ ಅವರು ರಾಜಕೀಯ ಪುನರ್ಜನ್ಮ ಪಡೆಯಲು ವೇದಿಕೆ ಸಜ್ಜುಗೊಳ್ಳುತ್ತಿದೆ.
ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಇಲ್ಲವೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಪಡೆದು ರಾಜ್ಯ ರಾಜಕೀಯದಲ್ಲಿ ಗಟ್ಟಿಯಾಗಿ ಬೇರೂರಲು ಹವಣಿಸುತ್ತಿರುವ ಯಡಿಯೂರಪ್ಪ ಅವರಿಗೆ ಈ ಬೆಳವಣಿಗೆ ಕೊಂಚ ನೆಮ್ಮದಿ ನೀಡಿದೆ. ಆದರೆ ಬೇಲೇಕೇರಿ ಬಂದರಿನಿಂದ ವಿದೇಶಕ್ಕೆ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯದಲ್ಲಿ ದಾಖಲಾಗಿರುವ ಏಕೈಕ ಪ್ರಕರಣ ಮಾತ್ರ ಬಾಕಿ ಇದ್ದು, ಇದು ಅವರು ರಣೋತ್ಸಾಹದಿಂದ ಮುನ್ನುಗ್ಗಲು ಅಡ್ಡಿಯಾಗಿದೆ. ಯಡಿಯೂರಪ್ಪನವರ ವಿರುದ್ಧ ಸಿಎಜಿ ವರದಿ ಆಧರಿಸಿ ದಾಖಲಾಗಿದ್ದ 15 ಮೊಕದ್ದಮೆಗಳನ್ನು ಹೈಕೋರ್ಟ್ ರದ್ದುಪಡಿಸಿದೆ. ಇವರ ಜತೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತವರ ಕುಟುಂಬದ ಮೇಲಿನ ಪ್ರಕರಣ ಕೂಡ ರದ್ದಾಗಿದೆ. ನ್ಯಾಯಮೂರ್ತಿ ಚಂದ್ರಕಲಾ ಅವರನ್ನೊಳಗೊಂಡ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದ್ದು, ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಈ ಬೆಳವಣಿಗೆ ನೆಮ್ಮದಿ ತಂದಂತಾಗಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ಪ್ರಶ್ನಿಸಿ ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಮಾನ್ಯ ಮಾಡಿದೆ. ಸಿಐಜಿ ವರದಿ ಆಧರಿಸಿ, ಮತ್ತೆ ಪ್ರಕರಣ ದಾಖಲು ಮಾಡಬಾರದೆಂದು ಲೋಕಾಯುಕ್ತಕ್ಕೆ ನ್ಯಾಯಪೀಠ ಆದೇಶ ನೀಡಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಬಾಹಿರವಾಗಿ ಬಿಡಿಎಯಿಂದ 40 ಪ್ರಕರಣಗಳಲ್ಲಿ ಡಿ ನೋಟಿಫಿಕೇಷನ್ ಮಾಡಿದ್ದರು. ಇದರಿಂದ ಸರಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ಸಿಎಜಿ ವರದಿ ನೀಡಿತ್ತು. ಈ ವರದಿ ಆಧಾರದ ಮೇಲೆ ಜಯಕುಮಾರ್ ಹಿರೇಮಠ್ ಎಂಬುವರು ಲೋಕಾಯುಕ್ತದಲ್ಲಿ ಯಡಿಯೂರಪ್ಪ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್‌ರಾವ್, ಆರೋಪದಲ್ಲಿ ಹುರುಳಿದಿಯೇ ಎಂಬುದರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಿಐಡಿಗೆ ವಹಿಸಿದ್ದರು. ಸಿಐಡಿ ಯಡಿಯೂರಪ್ಪ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಮೇಲ್ನೋಟಕ್ಕೆ ಆರೋಪ ಕಂಡು ಬಂದಿದ್ದು, ಪ್ರಕರಣ ದಾಖಲಿಸಬಹುದು ಎಂದು ಲೋಕಾಯುಕ್ತಕ್ಕೆ ವರದಿ ನೀಡಿತ್ತು.
ವರದಿ ಆಧಾರದ ಮೇಲೆ ಲೋಕಾಯುಕ್ತ ಬೆಂಗಳೂರು ನಗರ ಪೊಲೀಸರು 15 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಅವರ ವಿಚಾರಣೆಯನ್ನೂ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರನ್ನು ಬಂಧಿಸಿ ಬಿಡುಗಡೆ ಮಾಡಿದ್ದರು. ಲೋಕಾಯುಕ್ತರ ಕ್ರಮ ಪ್ರಶ್ನಿಸಿ ಯಡಿಯೂರಪ್ಪ ನ್ಯಾಯಾಲಯದ ಮೆಟ್ಟಿಲು ಹತ್ತಿ ರದ್ದುಗೊಳಿಸುವಂತೆ ಕೋರಿದ್ದರು.
ಸರಕಾರದಲ್ಲಿ ಉಂಟಾಗಿರುವ ಲೋಪದೋಷಗಳ ಬಗ್ಗೆ ಸಿಎಜಿ ಲೆಕ್ಕ ಪರಿಶೋಧನೆ ಮಾಡಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಬೇಕು. ಆ ಸಮಿತಿ ತಪ್ಪುಗಳು ಕಂಡುಬಂದಲ್ಲಿ ತಮಗೆ ನೋಟಿಸ್ ನೀಡಿ ವಿವರಣೆ ಪಡೆದು ತಪ್ಪಿದ್ದಲಿ ನಂತರ ಅವರು ಕ್ರಮ ಕೈಗೊಳ್ಳಲು ಅವಕಾಶ ಇದೆ. ಇದನ್ನು ಪ್ರಶ್ನಿಸಿ, ಲೋಕಾಯುಕ್ತ ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಯಡಿಯೂರಪ್ಪ ನ್ಯಾಯಾಲಯ ಮೊರೆ ಹೋಗಿದ್ದರು.
ಸಿಎಜಿ ವಕೀಲರು ಕೂಡ ಇದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡುವ ವರದಿ. ಇದು ಅಲ್ಲಿಗೆ ಮಾತ್ರ ಸೀಮಿತ. ಇದನ್ನು ಬೇರೆಯವರು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು ಯಡಿಯೂರಪ್ಪ ಕೈ ಬಲಪಡಿಸಿತು. ವಾದ-ವಿವಾದ ಆಲಿಸಿದ ನ್ಯಾಯಾಲಯ ತಡೆ ಹಿಡಿದಿದ್ದ ತೀರ್ಪು ಇಂದು ಮಧ್ಯಾಹ್ನ ಪ್ರಕಟಿಸಿತು.
1998ರಿಂದ 2012ರವರೆಗೆ 160 ಡಿ ನೋಟಿಫಿಕೇಷನ್ ಪ್ರಕರಣಗಳ ಬಗ್ಗೆ ಸಿಎಜಿ ವರದಿ ನೀಡಿದ್ದರೂ 2008ರಿಂದ 2012ರವರೆಗೆ ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರ ಪರಿಶೀಲಿಸಿ ಲೋಕಾಯುಕ್ತಕ್ಕೆ ದೂರು ದಾಖಲಾಗಿತ್ತು. ಯಡಿಯೂರಪ್ಪ ಅವರು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ ನಂತರವೂ ಡಿಸೆಂಬರ್ 16ರಂದು ಲೋಕಾಯುಕ್ತದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದನ್ನು ಸ್ಮರಿಸಬಹುದು.







