ಕೇಜ್ರಿವಾಲ್ ಮತ್ತು ಇತರರು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ: ಜೇಟ್ಲಿ

ಹೊಸದಿಲ್ಲಿ,ಜ.5: ಡಿಡಿಸಿಎ ಹಗರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಇತರ ಐವರ ವಿರುದ್ಧ ಮಾನನಷ್ಟ ದೂರನ್ನು ಸಲ್ಲಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ದಿಲ್ಲಿಯ ಮುಖ್ಯ ಮಹಾನಗರ ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿದರು.
ಕೇಜ್ರಿವಾಲ್ ಮತ್ತು ಇತರ ಐವರು ತನ್ನ ಮತ್ತು ತನ್ನ ಕುಟುಂಬ ಸದಸ್ಯರ ವಿರುದ್ಧ ‘ಸುಳ್ಳು’ ಮತ್ತು ‘ಮಾನಹಾನಿಕರ’ ಹೇಳಿಕೆಗಳನ್ನು ನೀಡಿದ್ದಾರೆಂದು ಜೇಟ್ಲಿ ನ್ಯಾ.ಸಂಜಯ ಖನಗವಾಲ್ ಅವರಿಗೆ ತಿಳಿಸಿದರು. ಕೇಜ್ರಿವಾಲ್ ಅವರೊಂದಿಗೆ ಕೆಲಸ ಮಾಡುತ್ತಿರುವ ನಿರ್ದಿಷ್ಟ ವ್ಯಕ್ತಿಯೋರ್ವರ ವಿರುದ್ಧದ ಸಿಬಿಐ ತನಿಖೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಹೇಳಿಕೆಗಳನ್ನು ನೀಡಲಾಗಿದೆ ಎಂದರು.
ಕಲಾಪದ ವೇಳೆ ಸುದ್ದಿಗಾರರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ರಹಸ್ಯವಾಗಿ ನಡೆದ ಕಲಾಪದಲ್ಲಿ ವಕೀಲರಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿತ್ತು. ಕೇಜ್ರಿವಾಲ್ ಮತ್ತು ಆಪ್ ನಾಯಕರಾದ ಕುಮಾರ್ ವಿಶ್ವಾಸ್, ಅಶುತೋಷ್, ಸಂಜಯ ಸಿಂಗ್, ರಾಘವ ಛಡ್ಡಾ ಮತ್ತು ದೀಪಕ್ ಬಾಜಪೈ ವಿರುದ್ಧ ಜೇಟ್ಲಿ ಡಿ.21ರಂದು ಮಾನಹಾನಿ ಮೊಕದ್ದಮೆಯನ್ನು ದಾಖಲಿಸಿದ್ದರು.





