ಶೀಘ್ರವೇ ಲೋಕಾಯುಕ್ತರ ನೇಮಕ

ಲೋಕಾಯುಕ್ತ ಹುದ್ದೆಗೆ ಕನ್ನಡಿಗರನ್ನೇ ನೇಮಿಸಬೇಕೆಂಬ ಒತ್ತಡವಿದೆ: ಸಿಎಂ
ಬೆಂಗಳೂರು, ಜ.5: ನೂತನ ಲೋಕಾಯುಕ್ತರ ನೇಮಕ ವಿಚಾರ ಸಂಬಂಧ ಎರಡು-ಮೂರು ದಿನಗಳಲ್ಲಿ ನ್ಯಾಯಾಧೀಶರೊಬ್ಬರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನೂತನ ಲೋಕಾಯುಕ್ತರ ನೇಮಕ ಸಂಬಂಧ ಈಗಾಗಲೇ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ, ಸ್ಪೀಕರ್, ಸಭಾಪತಿ ಹಾಗೂ ಉಭಯ ಸದನಗಳ ವಿಪಕ್ಷ ನಾಯಕರ ಸಭೆ ನಡೆಸಿ, ಎಲ್ಲರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ ಎಂದರು.
ಲೋಕಾಯುಕ್ತ ಹುದ್ದೆಗೆ ಕನ್ನಡಿಗರನ್ನೇ ನೇಮಿಸಬೇಕೆಂಬ ಆಗ್ರಹವು ಕೇಳಿ ಬಂದಿದ್ದು, ಲೋಕಾಯುಕ್ತ ಸ್ಥಾನದ ಪಟ್ಟಿಯಲ್ಲಿ ಪ್ರಸ್ತುತ ಕನ್ನಡಿಗರೊಬ್ಬರ ಹೆಸರೂ ಇದೆ ಎಂದ ಅವರು, ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಸಂಸ್ಥೆಗೆ ಸೂಕ್ತರನ್ನು ನೇಮಕ ಮಾಡಲಾಗುವುದು ಎಂದರು. ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಎ.ಆರ್.ನಾಯಕ್, ನ್ಯಾಯಮೂರ್ತಿಗಳಾದ ವಿಕ್ರಂಜಿತ್ ಸೇನ್, ಎನ್.ಕೆ.ಪಾಟೀಲ್ ಸೇರಿದಂತೆ ನಾಲ್ಕೈದು ಹೆಸರುಗಳ ಪ್ರಸ್ತಾಪ ಆಗಿದ್ದು, ಈ ಸಂಬಂಧ ಸಿದ್ದರಾಮಯ್ಯ ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ಬಳಿಕ ಸಂಪುಟ ಪುನಾರಚನೆ
ಬೆಂಗಳೂರು, ಜ.5: ಜಿಡ್ಡುಗಟ್ಟಿರುವ ರಾಜ್ಯ ಸಚಿವ ಸಂಪುಟಕ್ಕೆ ಪುನಶ್ವೇತನ ನೀಡಲು ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ನಂತರ ಪುನಾರಚನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಲಿದ್ದಾರೆ ಎನ್ನುವ ವಿಶ್ವಾಸ ತಮ್ಮದಾಗಿದೆ ಎಂದು ಹಿರಿಯ ಮುಖಂಡ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಸಂಪುಟ ಪುನಾರಚನೆಗೆ ಮನಸ್ಸು ಮಾಡಿದ್ದಾರೆ. ನಗರದ ಜಿ.ಕೆ.ವಿ.ಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪಂಚಾಯತ್ ಚುನಾವಣೆ ನಂತರ ಸಂಪುಟ ಪುನಾರಚನೆ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಸಂಪುಟದಲ್ಲಿರುವವರ ಪೈಕಿ ಕೆಲವರನ್ನು ಕೈ ಬಿಟ್ಟು, ಹೊಸದಾಗಿ ಕೆಲವರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು. ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ಬಳಿಕ ಹೈಕಮಾಂಡ್ ವರಿಷ್ಠರ ಜತೆ ಚರ್ಚಿಸಿದ ನಂತರ ಸಚಿವ ಸಂಪುಟವನ್ನು ಪುನಾರಚಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮಂತ್ರಿ ಮಂಡಲದಿಂದ ಕೆಲವರನ್ನು ಕೈ ಬಿಡುತ್ತೇವೆ ಎಂದಾಕ್ಷಣ ಅವರು ಚೆನ್ನಾಗಿ ಕೆಲಸ ಮಾಡುತ್ತಿರಲಿಲ್ಲ ಎಂದರ್ಥವಲ್ಲ. ಬದಲಿಗೆ ಬೇರೆಯವರಿಗೆ ಅವಕಾಶ ನೀಡಬೇಕು ಎಂದು ತೀರ್ಮಾನಿಸಿದಾಗ ಕೆಲವರು ತ್ಯಾಗ ಮಾಡಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಭ್ರಷ್ಟಾಚಾರದ ಆರೋಪದ ಮೇಲೆ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರು ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ನೂತನ ಲೋಕಾಯುಕ್ತ ಹುದ್ದೆಗೆ ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕು ಎಂಬ ಒತ್ತಡವಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಲೋಕಾಯುಕ್ತ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು ಎಂಬ ಕುರಿತು ಸೋಮವಾರ ಉನ್ನತ ಮಟ್ಟದ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿದ್ದೇನೆ.ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಒಂದು ತೀರ್ಮಾನಕ್ಕೆ ಬರುತ್ತೇನೆ ಎಂದರು.
ಪ್ರಮುಖವಾಗಿ ಲೋಕಾಯುಕ್ತ ಹುದ್ದೆಗೆ ಎರಡು ಹೆಸರುಗಳು ಪ್ರಸ್ತಾಪವಾಗಿದ್ದು,ಒಂದೆರಡು ದಿನಗಳಲ್ಲಿ ಯಾರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಬೇಕು ಎಂಬ ಕುರಿತು ರಾಜ್ಯಪಾಲರಿಗೆ ಶಿಫಾರಸು ಮಾಡುವುದಾಗಿ ಅವರು ವಿವರಿಸಿದರು.







