ದಿಲ್ಲಿಯಲ್ಲಿ ದೊಡ್ಡ ಡೀಸೆಲ್ ವಾಹನ ಮಾರಾಟ ನಿಷೇಧಕ್ಕೆ ಸುಪ್ರೀಂ ಅಸ್ತು

ಹೊಸದಿಲ್ಲಿ, ಜ.5: ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿ ವಿಷಗಾಳಿಯ ವಿರುದ್ಧ ಹೋರಾಡಲು ದೊಡ್ಡ ಡೀಸೆಲ್ ಕಾರುಗಳ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದ ಡಿಸೆಂಬರ್‌ನ ಆದೇಶವೊಂದನ್ನು ಸುಪ್ರೀಂಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.
ಆದಾಗ್ಯೂ ಅದು, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಟೊಯೊಟಾ ಹಾಗೂ ಮರ್ಸಿಡಿಸ್‌ಗಳಂತಹ ಕಾರು ತಯಾರಕರು ದಾಖಲಿಸಿದ ಮನವಿಯನ್ನು ಆಲಿಸಲು ಒಪ್ಪಿಕೊಂಡಿದ್ದು, ಡೀಸೆಲ್ ವಾಹನಗಳು ಪೆಟ್ರೋಲ್ ವಾಹನಗಳಿಗಿಂತ ಹೆಚ್ಚು ವಾಯು ಮಾಲಿನ್ಯ ಉಂಟು ಮಾಡುತ್ತಿವೆಯೇ ಅಥವಾ ಕಡಿಮೆಯೇ ಎಂಬುದನ್ನು ತೋರಿಸುವುದಕ್ಕಾಗಿ ದಾಖಲೆ ರೂಪದ ಪುರಾವೆ ಒದಗಿಸುವಂತೆ ಅವುಗಳಿಗೆ ಸೂಚಿಸಿದೆ.
ತಮ್ಮ ಮನವಿಯಲ್ಲಿ ಕಾರು ತಯಾರಿಕೆ ಕಂಪೆನಿಗಳು, ಮುಖ್ಯವಾಗಿ ಚಳಿಗಾಲದಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ದೊಡ್ಡ ಡೀಸೆಲ್ ಕಾರುಗಳ ಮಾರಾಟದ ಮೇಲೆ ನಿಷೇಧ ಹೇರಿರುವ ಸುಪ್ರೀಂಕೋರ್ಟ್‌ನ ಡಿ.16ರ ಆದೇಶವನ್ನು ಬದಲಾಯಿಸುವಂತೆ ಕೇಳಿಕೊಂಡಿವೆ. ದಿಲ್ಲಿಯನ್ನು ಪ್ರವೇಶಿಸುವ ಭಾರ ಹೊತ್ತಿರುವ ವಾಣಿಜ್ಯ ವಾಹನಗಳಿಗೆ ವಾತಾವರಣ ಪರಿಹಾರ ಶುಲ್ಕವನ್ನು (ಇಸಿಸಿ) ದುಪ್ಪಟ್ಟುಗೊಳಿಸಿರುವ ನ್ಯಾಯಾಲಯ, ರಾಷ್ಟ್ರ ರಾಜಧಾನಿ ವಲಯದಲ್ಲಿ (ಎನ್‌ಸಿಆರ್) ಎಸ್‌ಯುವಿ ಸಹಿತ 2 ಸಾವಿರ ಹಾಗೂ ಅದಕ್ಕಿಂತ ಹೆಚ್ಚು ಸಿ.ಸಿ.ಯ ಡೀಸೆಲ್ ವಾಹನಗಳ ನೋಂದಣಿಗೆ ಸಂಪೂರ್ಣ ನಿಷೇಧ ಹೇರಿತ್ತು.
ಇಂತಹ ವಾಹನಗಳು ಹೆಚ್ಚು ವಾಯು ಮಾಲಿನ್ಯ ಉಂಟು ಮಾಡುತ್ತವೆ ಹಾಗೂ ಅವುಗಳನ್ನು ಕೇವಲ ಶ್ರೀಮಂತರಷ್ಟೇ ಬಳಸುತ್ತಾರೆಂಬ ಕಾರಣವನ್ನು ಅದು ನೀಡಿತ್ತು.
ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 2,10,58 ಹಾಗೂ ರಾಜ್ಯ ಹೆದ್ದಾರಿ ಸಂಖ್ಯೆ 57ರ ಮೂಲಕ ಭಾರೀ ವಾಣಿಜ್ಯ ವಾಹನಗಳ ದಿಲ್ಲಿ ಪ್ರವೇಶಕ್ಕೂ ಸುಪ್ರೀಂಕೋರ್ಟ್ ನಿಷೇಧ ವಿಧಿಸಿತ್ತು. ಆದಾಗ್ಯೂ, ಅಂತಹ ವಾಹನಗಳು ದಿಲ್ಲಿಯವೇ ಆಗಿದ್ದು, ಹೆಚ್ಚುವರಿ ಮಾಲಿನ್ಯ ಸುಂಕ ಪಾವತಿಸಿದಲ್ಲಿ ಅವುಗಳ ದಿಲ್ಲಿ ಪ್ರವೇಶಕ್ಕೆ ಅನುಮತಿ ನೀಡಿತ್ತು.
ಸರಣಿ ಕ್ರಮಗಳಲ್ಲಿ ಸುಪ್ರೀಂಕೋರ್ಟ್, 5 ವರ್ಷಕ್ಕಿಂತ ಹಳೆಯ, ಎಲ್ಲ ಸರಕಾರಿ ಡೀಸೆಲ್ ವಾಹನಗಳನ್ನು ಬದಲಾಯಿಸುವಂತೆಯೂ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ರಾಷ್ಟ್ರ ರಾಜಧಾನಿ ವಲಯದ ಹೊರಗೆ 10 ವರ್ಷಗಳ ಹಳೆಯ ಡೀಸೆಲ್ ಹಾಗೂ 16 ವರ್ಷಗಳ ಹಳೆಯ ಪೆಟ್ರೋಲ್ ವಾಹನಗಳ ಮಾರಾಟಕ್ಕೆ ನಿರಾಕ್ಷೇಪಣ ಪತ್ರ ನೀಡಲು ನಿರಾಕರಿಸದಂತೆಯೂ ಅದು ದಿಲ್ಲಿ ಸರಕಾರಕ್ಕೆ ನಿರ್ದೇಶಿಸಿತ್ತು.







