ಅರಣ್ಯ ಇಲಾಖೆ ದಿನಗೂಲಿ ನೌಕರರ ಅನಿರ್ದಿಷ್ಟಾವಧಿ ಧರಣಿ ಆರಂಭ

ಮಂಗಳೂರು, ಜ.5: ಅರಣ್ಯ ಇಲಾಖೆಯ ಮಂಗಳೂರು ವೃತ್ತದ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಸಿಪಿ ದಿನಗೂಲಿ ನೌಕರರು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಗರದ ಪಡೀಲ್ ಅಳಪೆಯ ಅರಣ್ಯ ಭವನದಲ್ಲಿ ಇರುವ ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿಯನ್ನು ಇಂದಿನಿಂದ ಆರಂಭಿಸಿದರು.
ಪಡೀಲ್‌ವೃತ್ತದಿಂದ ಅಳಪೆಯ ಅರಣ್ಯ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ದಿನಗೂಲಿ ನೌಕರರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಮುಂದೆ ಧರಣಿ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಎಂ. ನಾಗರಾಜು ಮಂಗಳೂರು ವೃತ್ತದ ಅರಣ್ಯ ಇಲಾಖೆಯ ವಿವಿಧ ವಲಯಗಳಲ್ಲಿ ಕಳೆದ 15ರಿಂದ 25 ವರ್ಷಗಳ ಅವಧಿಯಿಂದ ದಿನಗೂಲಿ ಪಿಸಿಪಿ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಠ ವೇತನ, ಹೆಚ್ಚುವರಿ ವೇತನ ಹಾಗೂ 2013ರ ದಿನಗೂಲಿ ವಿಧೇಯಕ ಕ್ಷೇಮಾಭಿವೃದ್ಧಿ ಅಧಿನಿಯಮ ಸಕ್ರಮಗೊಳಿಸಿ ಹೆಚ್ಚಿನ ಸೇವಾ ಸೌಲಭ್ಯ ನೀಡಬೇಕೆಂದು ಸರಕಾರಿ ಆದೇಶವಿದ್ದರೂ ಮಂಗಳೂರು ವೃತ್ತದ ಅಧಿಕಾರಿ ದಿನಗೂಲಿ ನೌಕರರಿಗೆ ಸೌಲಭ್ಯ ನೀಡದೆ ನೌಕರರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಹರೀಶ್, ಉಪಾಧ್ಯಕ್ಷ ಮೋಹನ್ ಡಿ, ಖಜಾಂಚಿ ಸತೀಶ್, ನಿರ್ದೇಶಕರಾದ ಸದಾನಂದ, ಚಿದಾನಂದ, ಚಂದ್ರಶೇಖರ, ಸಾಧು ಕುಲಾಲ್, ಶೇಖರ, ಸತೀಶ್ ಕೆ.ಎಸ್., ಸರಿನಾ, ಶೈಲಜಾ ಮುಂತಾದವರು ಉಪಸ್ಥಿತರಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ, ಹತ್ತು ವರ್ಷಗಳ ಅನುಭವ ಇರುವ ದಿನಗೂಲಿ ನೌಕರರ ಪಟ್ಟಿಯನ್ನು ತಯಾರಿಸಲಾಗಿದೆ. ಇದನ್ನು ದಾಖಲಾತಿ ಮಾಡಿ ಮೇಲಾಧಿಕಾರಿಗಳಿಗೆ ಈಗಾಗಲೇ ಕಳುಹಿಸಿಕೊಡಲಾಗಿದೆ ಎಂದರು.





