ಸೌದಿ-ಇರಾನ್ ಬಿಕ್ಕಟ್ಟು ಶಮನಕ್ಕೆ ಬಾನ್ ಕಿ ಮೂನ್ ಕರೆ
ವಿಶ್ವಸಂಸ್ಥೆ, ಜ.5: ಉದ್ವಿಗ್ನತೆಯನ್ನು ಇನ್ನಷ್ಟು ಉಲ್ಬಣಗೊಳಿಸುವ ಯಾವುದೇ ಕ್ರಮಗಳಿಗೆ ಮುಂದಾಗದಂತೆ ಸೌದಿ ಅರೇಬಿಯ ಹಾಗೂ ಇರಾನ್ ರಾಷ್ಟ್ರಗಳನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಕೇಳಿಕೊಂಡಿದ್ದಾರೆ.
ಶಿಯಾ ಧರ್ಮಗುರು ಶೇಕ್ ನಿಮ್ರ್ ಅಲ್ ನಿಮ್ರ್‌ರನ್ನು ಮರಣದಂಡನೆಗೊಳಪಡಿಸಿರುವ ಸೌದಿ ಅರೇಬಿಯದ ಕ್ರಮದ ಬಗ್ಗೆ ಬಾನ್ ಕಿ ಮೂನ್ ಈಗಾಗಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಸೌದಿಯ ವಿದೇಶಾಂಗ ಸಚಿವ ಆದಿಲ್ ಬಿನ್ ಅಹ್ಮದ್ ಅಲ್ ಝುಬೈರ್ ಹಾಗೂ ಇರಾನ್‌ನ ವಿದೇಶಾಂಗ ಸಚಿವ ಮುಹಮ್ಮದ್ ಜಾವೇದ್ ಶರೀಫ್‌ರಿಗೆ ದೂರವಾಣಿ ಕರೆ ಮಾಡಿರುವ ಬಾನ್ ಕಿ ಮೂನ್, ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸುವ ರೀತಿಯ ಯಾವುದೇ ಕ್ರಮದಿಂದ ದೂರ ಉಳಿಯುವಂತೆ ಅವರನ್ನು ಕೋರಿದ್ದಾರೆ’’ ಎಂದು ಬಾನ್ ಕಿ ಮೂನ್ ವಕ್ತಾರ ಸ್ಟೀಫನ್ ಡ್ಯುಜಾರಿಕ್ ತಿಳಿಸಿದ್ದಾರೆ.
ಸೌದಿ ವಿದೇಶಾಂಗ ಸಚಿವರಿಗೆ ಸೋಮವಾರ ದೂರವಾಣಿ ಕರೆ ಮಾಡಿರುವ ಬಾನ್ ಕಿ ಮೂನ್, ಶಿಯಾ ಧರ್ಮಗುರುವಿಗೆ ಮರಣದಂಡನೆ ಜಾರಿಗೊಳಿಸಿದ ಸೌದಿಯ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಮಾತ್ರವಲ್ಲದೆ ಟೆಹರಾನ್‌ನಲ್ಲಿರುವ ಸೌದಿ ದೂತಾವಾಸದ ಮೇಲೆ ನಡೆದಿರುವ ದಾಳಿಯನ್ನು ಖಂಡನೀಯವೆಂದು ಅಭಿಪ್ರಾಯಿಸಿರುವ ಬಾನ್ ಕಿ ಮೂನ್, ಸೌದಿಯೊಂದಿಗೆ ರಾಜತಾಂತ್ರಿಕ ಸಂಬಂಧಗಳು ಕಡಿದುಕೊಂಡಿರುವ ಬಗ್ಗೆ ಇರಾನ್ ಕಳವಳಗೊಂಡಿದೆ ಎಂಬುದಾಗಿಯೂ ತಿಳಿಸಿದ್ದಾರೆ.
ಯಮನ್‌ನಲ್ಲಿ ಕದನವಿರಾಮಕ್ಕೆ ಬದ್ಧವಾಗಿರುವಂತೆಯೂ ಸೌದಿ ಅರೇಬಿಯವನ್ನು ಬಾನ್ ಕಿ ಮೂನ್ ಒತ್ತಾಯಿಸಿದ್ದಾರೆ.
ಸೌದಿ-ಇರಾನ್ ವ್ಯಾಪಾರ, ವಿಮಾನಯಾನ ಸ್ಥಗಿತ
ಜಿದ್ದಾ, ಜ.5: ಶಿಯಾ ಧಾರ್ಮಿಕ ವಿದ್ವಾಂಸ ನಿಮ್ರ್‌ರನ್ನು ಸೌದಿ ಅರೇಬಿಯವು ಮರಣದಂಡನೆಗೆ ಒಳಪಡಿಸಿದ ಬಳಿಕ ಉಂಟಾಗಿರುವ ಉದ್ವಿಗ್ನತೆಗೆ ಇರಾನ್ ಹೊಣೆ ಎಂದು ಸೌದಿ ಅರೇಬಿಯದ ವಿದೇಶಾಂಗ ಸಚಿವ ಆದಿಲ್ ಅಲ್ ಝುಬೈರ್ ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಸೌದಿ ವಿರುದ್ಧ ದಾಳಿಕಾರರನ್ನು ಕಳುಹಿಸುತ್ತಿರುವುದಲ್ಲದೆ ಸೌದಿ ಮತ್ತು ಅದರ ನೆರೆ ರಾಷ್ಟ್ರಗಳ ವಿರುದ್ಧ ಇರಾನ್ ಪಿತೂರಿ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ‘‘ಉದ್ವಿಗ್ನತೆ ಅಧಿಕಗೊಳ್ಳಲು ಸೌದಿ ಅರೇಬಿಯ ಕಾರಣವಾಗಿಲ್ಲ. ನಮ್ಮ ಎಲ್ಲ ಕ್ರಮಗಳು ಪ್ರತಿಕ್ರಿಯಾತ್ಮಕ. ಲೆಬನಾನ್‌ನಲ್ಲಿ ಇರಾನ್ ಹಸ್ತಕ್ಷೇಪ ನಡೆಸಿದೆ. ಸಿರಿಯಕ್ಕೆ ತನ್ನ ಪಡೆಗಳನ್ನು ಕಳುಹಿಸಿರುವ ರಾಷ್ಟ್ರವೂ ಇರಾನ್ ಆಗಿದೆ’’ ಎಂದವರು ಹೇಳಿದ್ದಾರೆ. ಆದಾಗ್ಯೂ, ಹಜ್ ಅಥವಾ ವರ್ಷದ ಇತರ ಸಂದರ್ಭಗಳಲ್ಲಿ ಉಮ್ರಾ ಯಾತ್ರೆ ನೆರವೇರಿಸಲು ಇರಾನ್‌ನ ಯಾತ್ರಿಕರನ್ನು ಮುಂದಕ್ಕೂ ಸೌದಿ ಅರೇಬಿಯ ಸ್ವಾಗತಿಸಲಿದೆ’ ಎಂದವರು ಹೇಳಿದ್ದಾರೆ.
ಸೌದಿಯ ವಿಮಾನ ಯಾನ ಪ್ರಾಧಿಕಾರ(ಜಿಎಸಿಎ) ಸೋಮವಾರ ಇರಾನ್‌ಗೆ ಹೋಗುವ ಹಾಗೂ ಅಲ್ಲಿಂದ ಬರುವ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ರಿಯಾದ್-ಟೆಹರಾನ್ ರಾಜತಾಂತ್ರಿಕ ಸಂಬಂಧಗಳು ಕಡಿತಗೊಂಡ ಬಳಿಕ ಸೋಮವಾರ ತೈಲ ಬೆಲೆಯಲ್ಲೂ ಏರಿಕೆ ಉಂಟಾಗಿದೆ.
ಸೌದಿ ಅರೇಬಿಯ-ಇರಾನ್ ನಡುವೆ ಬಿಕ್ಕಟ್ಟು ತೀವ್ರಗೊಂಡ ಬೆನ್ನಲ್ಲೇ, ಬಹರೈನ್ ಹಾಗೂ ಸುಡಾನ್ ಕೂಡಾ ಇರಾನ್‌ನೊಂದಿಗೆ ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲು ನಿರ್ಧರಿಸಿವೆ. ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಐರೋಪ್ಯ ರಾಷ್ಟ್ರಗಳು ಹಾಗೂ ಪ್ರಾದೇಶಿಕ ಶಕ್ತಿಯಾಗಿರುವ ಟರ್ಕಿ ತೀವ್ರ ಕಳವಳ ವ್ಯಕ್ತಪಡಿಸಿದ್ದರೆ, ಮಾತುಕತೆಯ ಮಧ್ಯಸ್ಥಿಕೆಗೆ ಮಾಸ್ಕೊ ಮುಂದೆ ಬಂದಿದೆ.
ಅರಬ್ ಲೀಗ್‌ನಿಂದ ತುರ್ತುಸಭೆ
ಸೌದಿ-ಇರಾನ್ ಬಿಕ್ಕಟ್ಟು ತೀವ್ರಗೊಂಡಿರುವಂತೆಯೇ ಈ ಬಗ್ಗೆ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲು ಅರಬ್ ಲೀಗ್ ರವಿವಾರ ಸೌದಿ ಅರೇಬಿಯ ನೇತೃತ್ವದಲ್ಲಿ ಈಜಿಪ್ಟ್‌ನ ರಾಜಧಾನಿ ಕೈರೊದಲ್ಲಿ ತುರ್ತು ಸಭೆಯೊಂದನ್ನು ಆಯೋಜಿಸಿದೆ.