ಕಠಿಣ ಬಂದೂಕು ಕಾಯ್ದೆ: ಒಬಾಮ

ವಾಷಿಂಗ್ಟನ್, ಜ.5: ಕೆಲವೇ ದಿನಗಳಲ್ಲಿ ತಾನು ಕಠಿಣ ಬಂದೂಕು ಕಾಯ್ದೆಯೊಂದನ್ನು ಘೋಷಿಸಲಿದ್ದು, ಅದು ಸಾವಿರಾರು ಕುಟುಂಬಗಳು ತಮ್ಮ ಬಂಧಗಳ ವಿಯೋಗಕ್ಕೆ ಒಳಗಾಗುವುದನ್ನು ತಪ್ಪಿಸಲಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಹೊಸ ಕಾಯ್ದೆಯಲ್ಲಿ ತಾನು ಏನು ಘೋಷಿಸಲಿರುವರೆಂಬುದನ್ನು ಒಬಾಮ ಸ್ಪಷ್ಟಪಡಿಸಿಲ್ಲವಾದರೂ, ಬಂದೂಕು ಖರೀದಿಸುವವರ ಹಿನ್ನೆಲೆಯ ಬಗ್ಗೆ ವ್ಯಾಪಕ ತಪಾಸಣೆಗೆ ಅದು ಅವಕಾಶ ಕಲ್ಪಿಸಲಿದೆ.
ಅಮೆರಿಕದಲ್ಲಿ ಹೆಚ್ಚುತ್ತಿರುವ ಶೂಟೌಟ್ ಪ್ರಕರಣಗಳ ಹಿನ್ನೆಲೆಯಲ್ಲಿ ಸಂಸತ್‌ನ ಅಂಗೀಕಾರದ ಹೊರತಾಗಿಯೂ ತಾನು ಕ್ರಮ ಕೈಗೊಳ್ಳಬೇಕಾದ ಅಗತ್ಯ ಕಂಡು ಬಂದಿರುವುದಾಗಿ ಸೋಮವಾರ ಶ್ವೇತಭವನದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ವೇಳೆ ಒಬಾಮ ಹೇಳಿದ್ದಾರೆ. ಬಂದೂಕು ಬೆಂಬಲಿಗರು ಈ ರೀತಿಯ ಯಾವುದೇ ಹೊಸ ಕಾನೂನುಗಳನ್ನು ತೀವ್ರವಾಗಿ ವಿರೋಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ತಾನು ಕೈಗೊಳ್ಳುತ್ತಿರುವ ಕ್ರಮವು ತನ್ನ ಅಧಿಕಾರದ ಪರಿಮಿತಿಯಲ್ಲಿ ಬರುವುದಾಗಿ ಒಬಾಮ ಹೇಳಿದ್ದಾರೆ.
ತಾನು ಕೈಗೊಳ್ಳುತ್ತಿರುವ ಕ್ರಮವು ಅಮೆರಿಕನ್ನರಿಗೆ ಶಸ್ತ್ರಾಸ್ತ್ರಗಳನ್ನು ಹೊಂದುವ ಅವಕಾಶವನ್ನು ಕಲ್ಪಿಸುವ ಎರಡನೆ ತಿದ್ದುಪಡಿಗೆ ಪೂರಕವಾಗಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.