ಎಲ್ಲ ಭಾರತೀಯ ಬೆಸ್ತರ ಬಿಡುಗಡೆಗೆ ಶ್ರೀಲಂಕಾ ನಿರ್ಧಾರ
ಕೊಲಂಬೊ, ಜ.5: ಸ್ವಾಗತಾರ್ಹ ಕ್ರಮವೊಂದರಲ್ಲಿ ಶ್ರೀಲಂಕಾ ಸರಕಾರವು ತನ್ನ ವಶದಲ್ಲಿರುವ ಎಲ್ಲ ಭಾರತೀಯ ಮೀನುಗಾರರನ್ನು ಜ.15ರ ‘ತೈ ಪೊಂಗಲ್’ ದಿನಕ್ಕೆ ಮೊದಲು ಬಿಡುಗಡೆಗೊಳಿಸಲು ಸೋಮವಾರ ನಿರ್ಧರಿಸಿದೆ.
ತನ್ನ ನೆರೆಯ ದೇಶದೊಂದಿಗೆ ಸಂಬಂಧವನ್ನು ಸರಿಪಡಿಸಿಕೊಳ್ಳುವ ಆಶಯದಿಂದ ಅದು ಈ ನಿರ್ಧಾರ ಕೈಗೊಂಡಿದೆ. ಉಭಯ ದೇಶಗಳ ಪರಸ್ಪರ ತಿಳುವಳಿಕೆಯೊಂದಿಗೆ ಅದನ್ನು ನಡೆಸಲಾಗುವುದು. ಕೊಲಂಬೊದಲ್ಲಿನ ಭಾರತೀಯ ದೂತಾವಾಸವೂ ಈ ವಿಷಯದಲ್ಲಿ ತಮ್ಮನ್ನು ಸಂಪರ್ಕಿಸಿದೆ. ಭಾರತ ಸರಕಾರವೂ ತನ್ನ ಕಾರಾಗೃಹಗಳಲ್ಲಿರುವ ಶ್ರೀಲಂಕಾದ ಬೆಸ್ತರನ್ನು ಬಿಡುಗಡೆ ಮಾಡಬೇಕೆಂದು ತಾವು ಬಯಸುತ್ತಿದ್ದೇವೆಂದು ಶ್ರೀಲಂಕಾದ ಮೀನುಗಾರಿಕೆ ಹಾಗೂ ಸಾಗರ ಸಂಪನ್ಮೂಲ ಸಚಿವ ಮಹಿಂದ ಅಮರವೀರ ಅಲ್ಲಿನ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಆದಾಗ್ಯೂ, ಭಾರತೀಯ ಮೀನುಗಾರರು ಶ್ರೀಲಂಕಾದ ಜಲವನ್ನು ಕಾನೂನು ಬಾಹಿರವಾಗಿ ಪ್ರವೇಶಿಸುವುದನ್ನು ನಿರುತ್ತೇಜಿಸಲು ಅವರ ದೋಣಿಗಳು ಹಾಗೂ ಟ್ರಾಲರ್‌ಗಳನ್ನು ಬಿಡುಗಡೆ ಮಾಡುವುದಿಲ್ಲ. ತಮ್ಮ ಜಲಗಡಿಯನ್ನು ಅನಧಿಕೃತವಾಗಿ ಉಲ್ಲಂಘಿಸಿ, ತಮ್ಮ ಸಾಗರ ಸಂಪನ್ಮೂಲವನ್ನು ನಾಶಗೊಳಿಸದಂತೆ ತಾವು ಈ ನೀತಿ ನಿರ್ಧಾರವನ್ನು ಕೈಗೊಂಡಿದ್ದೇವೆಂದು ಅವರು ಹೇಳಿದ್ದಾರೆ.
ಡಿ.29ರಂದು ಶ್ರೀಲಂಕಾದ ಜಲ ಸೇನೆಯು ತಮಿಳುನಾಡಿಗೆ ಸೇರಿರುವ 29 ಮಂದಿ ಬೆಸ್ತರನ್ನು ಬಂಧಿಸಿತ್ತು. ವಿವಾದ ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಜೆ.ಜಯಲಲಿತಾ ಮನವಿ ಮಾಡಿದ್ದರು.
ಮೋದಿಯವರಿಗೆ ಬರೆದಿದ್ದ ಪತ್ರವೊಂದರಲ್ಲಿ ಜಯಾ, 84 ಮಂದಿ ಬೆಸ್ತರು ಹಾಗೂ 62 ಮೀನುಗಾರಿಕೆ ದೋಣಿಗಳು ಶ್ರೀಲಂಕಾದ ವಶದಲ್ಲಿವೆಯೆಂದು ಪ್ರತಿಪಾದಿಸಿದ್ದರು.
ಪಾಕ್ ಜಲಸಂಧಿಯಲ್ಲಿ ತಮ್ಮ ಮೀನುಗಾರರ ಮೇಲೆ ದಾಳಿ ಹಾಗೂ ಅಪಹರಣ ಅವ್ಯಾಹತವಾಗಿ ನಡೆಯುತ್ತಿದೆ. ಅದು ತಮಿಳುನಾಡಿನ ಪ್ರಾಣ ಹಾಗೂ ಜೀವನವನ್ನು ಬಾಧಿಸುತ್ತಿರುವ ಗಂಭೀರ ವಿಷಯವಾಗಿದೆಯೆಂದು ಅವರು ಹೇಳಿದ್ದರು.
ಇದೇವೇಳೆ, ಶ್ರೀಲಂಕಾದ ನೌಕಾಪಡೆಯು ಭಾರತೀಯ ಬೆಸ್ತರ ಮೇಲೆ ಸುಳ್ಳು ಆರೋಪ ಹೊರಿಸುವ ಹಾಗೂ ಅದು ಭಾರತೀಯ ಜಲಪ್ರದೇಶಕ್ಕೆ ನುಸುಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಅಮಾಯಕ ಬೆಸ್ತರನ್ನು ಬಂಧಿಸಿ, ಅವರನ್ನು 3 ತಿಂಗಳು ಬಂಧನದಲ್ಲಿರಿಸುವುದು ಮಾನವ ಹಕ್ಕು ಉಲ್ಲಂಘನೆಯಾಗಿದೆ. ಇದು ಶ್ರೀಲಂಕಾ ಅನುಸರಿಸುತ್ತಿರುವ ಅಪಾಯಕಾರಿ ಪ್ರವೃತ್ತಿಯಾಗಿದೆಯೆಂದು ಪಿಎಂಕೆ ನಾಯಕ ಎಸ್.ರಾಮದಾಸ್ ಆರೋಪಿಸಿದ್ದಾರೆ.ಆದರೆ, ಶ್ರೀಲಂಕಾದ ನೌಕಾಪಡೆಯ ವಕ್ತಾರ ಕ್ಯಾ.ಅಲಾವಿ ಅಕ್ರಂ ಈ ಆರೋಪ ಸುಳ್ಳೆಂದು ತಳ್ಳಿ ಹಾಕಿದ್ದಾರೆ.