ಮಾಜಿ ಸಿಜೆಐ ಕಪಾಡಿಯಾ ವಿಧಿವಶ

ಮುಂಬೈ,ಜ.5: ಕೆಲವು ಚಾರಿತ್ರಿಕ ತೀರ್ಪುಗಳನ್ನು ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಸರೋಶ್ ಹೋಮಿ ಕಪಾಡಿಯಾ(68) ಅವರು ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರು ಪತ್ನಿ,ಚಾರ್ಟರ್ಡ್ ಅಕೌಂಟೆಂಟ್ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ನ್ಯಾ.ಕಪಾಡಿಯಾ ಅವರ ಅಂತ್ಯಸಂಸ್ಕಾರವು ಇಂದು ಸಂಜೆ ದಕ್ಷಿಣ ಮುಂಬೈನ ಕೆಂಪ್ಸ್ ಕಾರ್ನರ್‌ನ ‘ಟವರ್ ಆಫ್ ಸೈಲೆನ್ಸ್’ನಲ್ಲಿ ಪಾರ್ಸಿ ಸಂಪ್ರದಾಯದಂತೆ ಜರುಗಿತು. 1947ರಲ್ಲಿ ಮುಂಬೈಯಲ್ಲಿ ಜನಿಸಿದ್ದ ನ್ಯಾ.ಕಪಾಡಿಯಾ ಏಷ್ಯಾದಲ್ಲಿಯೇ ಅತ್ಯಂತ ಹಳೆಯ ಕಾನೂನು ಮಹಾವಿದ್ಯಾಲಯವಾಗಿರುವ ನಗರದ ಸರಕಾರಿ ಕಾನೂನು ಕಾಲೇಜಿನಿಂದ ಪದವಿಯನ್ನು ಪಡೆದಿದ್ದರು. 4ನೆ ದರ್ಜೆಯ ಉದ್ಯೋಗಿಯಾಗಿ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದರು. ಬಳಿಕ ಗುಮಾಸ್ತನಾಗಿ ಕಾನೂನು ಸಂಸ್ಥೆ ಗಗ್ರಾಟ್ ಆ್ಯಂಡ್ ಕಂಪೆನಿಯನ್ನು ಸೇರಿದ್ದರು. ಈ ವೇಳೆ ‘ಫೈರ್ ಬ್ರಾಂಡ್’ ಕಾರ್ಮಿಕ ವಕೀಲ ಎಂದೇ ಖ್ಯಾತರಾಗಿದ್ದ ಫಿರೋಝ್ ದಮಾನಿಯಾ ಅವರೊಂದಿಗೆ ಕಾರ್ಯ ನಿರ್ವಹಿಸಿದ್ದರು. 1974ರಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ವಕೀಲರಾದರು. 2010,ಮೇ 12ರಂದು ಭಾರತದ 38ನೆಯ ಮುಖ್ಯ ನ್ಯಾಯಮೂರ್ತಿಯಾದರು. 2012,ಸೆ.29ರಂದು ನಿವೃತ್ತರಾಗುವವರೆಗೆ ಈ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು.





