ಎಸ್ಪಿ ಸಲ್ವಿಂದರ್ ಸಿಂಗ್ ಮೇಲೆ ಸಂಶಯದ ತೂಗುಗತ್ತಿ
ಪಠಾಣ್‌ಕೋಟ್ ಭಯೋತ್ಪಾದಕ ದಾಳಿ ಪ್ರಕರಣ
ಪಂಜ್ ಪೀರ್ ದರ್ಗಾದ ಉಸ್ತುವಾರಿಯ ಹೇಳಿಕೆ ಮುಳುವಾಗಲಿದೆಯೇ?
ಪಠಾಣ್‌ಕೋಟ್,ಜ.6: ಪಠಾಣ್‌ಕೋಟ್ ಭಯೋತ್ಪಾದಕ ದಾಳಿಗಳ ಕುರಿತಂತೆ ನಡೆಯುತ್ತಿರುವ ತನಿಖೆಯಲ್ಲಿ ಲಭ್ಯವಾಗಿರುವ ಇನ್ನಷ್ಟು ಸುಳಿವುಗಳಿಂದಾಗಿ ಗುರುದಾಸಪುರ ಎಸ್‌ಪಿ ಸಲ್ವಿಂದರ್ ಸಿಂಗ್ ಅವರು ದಾಳಿಕೋರರೊಂದಿಗೆ ನಂಟು ಹೊಂದಿದ್ದರೇ ಎಂಬ ಸಂಶಯವನ್ನು ಹುಟ್ಟುಹಾಕಿದೆ.
ತಾನು ಪಂಜ್ ಪೀರ್ ದರ್ಗಾಕ್ಕೆ ನಿಯಮಿತವಾಗಿ ಭೇಟಿಯನ್ನು ನೀಡುತ್ತಿದ್ದೇನೆ ಎಂದು ಸಿಂಗ್ ಹೇಳಿಕೊಂಡಿದ್ದರು. ಆದರೆ ತಾನು ಈ ಹಿಂದೆಂದೂ ಸಿಂಗ್ ಅವರನ್ನು ಅಲ್ಲಿ ಕಂಡಿಲ್ಲ ಎಂದು ದರ್ಗಾದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಸೋಮ್ ಸ್ಪಷ್ಟಪಡಿಸಿದ್ದಾರೆ.
ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಗೊಳಿಸಿರುವ ಸೋಮ್, ತಾನು ಭೇಟಿ ನೀಡಲಿರುವುದರಿಂದ ದರ್ಗಾವನ್ನು ತಡರಾತ್ರಿಯವರೆಗೂ ತೆರೆದಿಡುವಂತೆ ರಾತ್ರಿ 8:30ರ ಸುಮಾರಿಗೆ ಸಿಂಗ್ ತನಗೆ ಕರೆ ಮಾಡಿದ್ದರು. ಆಗಲೇ ತಡವಾಗಿದ್ದು ದರ್ಗಾವನ್ನು ಮುಚ್ಚಬೇಕಾಗಿದ್ದರಿಂದ ತಾನು ಅವರ ಸೂಚನೆಯನ್ನು ತಿರಸ್ಕರಿಸಿದ್ದೆ. ಆದರೆ ತನ್ನನ್ನು ಬಲವಂತಗೊಳಿಸಿದ ಅವರು ದರ್ಗಾವನ್ನು ತೆರೆದಿರಿಸುವಂತೆ ಆದೇಶಿಸಿದ್ದರು ಎಂದು ತಿಳಿಸಿದ್ದಾರೆ.
ಅದೇ ದಿನ ಎಸ್‌ಪಿಯವರ ಮಿತ್ರ,ಆಭರಣ ವ್ಯಾಪಾರಿ ರಾಜೇಶ್ ವರ್ಮಾ ಎರಡು ಬಾರಿ ದರ್ಗಾಕ್ಕೆ ಭೇಟಿ ನೀಡಿದ್ದರು. ಅವರನ್ನು ತಾನು ಈ ಹಿಂದೆಂದೂ ದರ್ಗಾದಲ್ಲಿ ಕಂಡಿರಲಿಲ್ಲ ಎಂದು ಸೋಮ್ ಹೇಳಿದ್ದಾರೆ.
ಇನ್ನೊಂದು ದಿಗ್ಭ್ರಮೆಗೊಳಿಸುವ ಅಂಶವೆಂದರೆ ಎನ್‌ಐಎ ನಡೆಸಿದ ತನಿಖೆಯಲ್ಲಿ ಪಾಕಿಸ್ತಾನದ ಎಪ್ಕಾಟ್ ಬ್ರಾಂಡ್ ಶೂಗಳ ಹೆಜ್ಜೆ ಗುರುತುಗಳು ಪಂಜಾಬಿನ ಬಾಮಿಯಾಲ್ ಪ್ರದೇಶದಲ್ಲಿ ಪತ್ತೆಯಾಗಿವೆ. ಹೆಜ್ಜೆ ಗುರುತುಗಳು ಪತ್ತೆಯಾದ ಸ್ಥಳ ದರ್ಗಾಕ್ಕೆ ತೀರ ಸಮೀಪವಿದೆ ಮತ್ತು ದರ್ಗಾ ಗಡಿಯಿಂದ ಕೆಲವೇ ಕಿ.ಮೀ.ಅಂತರದಲ್ಲಿದೆ.
ಸಿಂಗ್ ಅವರನ್ನು ಎನ್‌ಐಎ ತನ್ನ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಪಠಾಣ್‌ಕೋಟ್ ದಾಳಿಗಳಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿರಬಹುದಾಗಿದೆ, ಅಲ್ಲದೆ ಅವರು ಭಯೋತ್ಪಾದಕರಿಗೆ ವಾಹನ ಇತ್ಯಾದಿ ಸೇರಿದಂತೆ ಅಗತ್ಯ ಬೆಂಬಲವನ್ನೂ ಒದಗಿಸಿರಬಹುದು ಎಂದು ಮೂಲಗಳು ತಿಳಿಸಿವೆ.
ಪ್ರದೇಶದಲ್ಲಿ ಅದಾಗಲೇ ಭಯೋತ್ಪಾದಕರ ಸಂಭಾವ್ಯ ದಾಳಿಯ ಬಗ್ಗೆ ಕಟ್ಟೆಚ್ಚರವನ್ನು ವಹಿಸಲಾಗಿತ್ತು ಮತ್ತು ಎಸ್‌ಪಿ ಅಂತಹ ನಿರ್ಜನ ಪ್ರದೇಶಕ್ಕೆ ನಿರಾಯುಧರಾಗಿ ತೆರಳಿದ್ದರು. ಹೀಗಾಗಿ ದರ್ಗಾಕ್ಕೆ ಅವರ ತಡರಾತ್ರಿಯ ಭೇಟಿ ಸಂಶಯವನ್ನು ಸೃಷ್ಟಿಸಿದೆ.
ಎಸ್ಪಿ ಸಲ್ವಿಂದರ್ ಸಿಂಗ್ ಅವರ ಕಾರನ್ನು ತನಿಖಾ ಕೇಂದ್ರಗಳಲ್ಲಿ ಏಕೆ ತಡೆದಿರಲಿಲ್ಲ ಎಂಬ ಬಗ್ಗೆ ತನಿಖೆಯನ್ನು ನಡೆಸುವುದಾಗಿ ಪಂಜಾಬ್ ಡಿಜಿಪಿ ಸುರೇಶ್ ಅರೋರಾ ಅವರು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು. ಪಂಜ್ ಪೀರ್ ದರ್ಗಾದಿಂದ ವಾಪಸಾಗುತ್ತಿದ್ದಾಗ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ತನ್ನನ್ನು ಮತ್ತು ತನ್ನೊಂದಿಗಿದ್ದ ಇನ್ನಿಬ್ಬರನ್ನು ಅಪಹರಿಸಿ ಬಳಿಕ ಬಿಡುಗಡೆಗೊಳಿಸಿದ್ದರು ಎಂದು ಸಿಂಗ್ ಹೇಳಿಕೊಂಡಿದ್ದರು. ಇದರ ಬೆನ್ನಿಗೇ ಭಯೋತ್ಪಾದಕರು ಪಠಾಣ್‌ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದರು.







