ಸಲ್ಮಾನ್ ಬಟ್, ಆಸಿಫ್ ತಕ್ಷಣ ವಾಪಸಾಗಲ್ಲ: ಪಿಸಿಬಿ

ಕರಾಚಿ, ಜ.6: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಕಳಂಕಿತಗೊಂಡಿರುವ ಸಲ್ಮಾನ್ ಬಟ್ ಹಾಗೂ ಮುಹಮ್ಮದ್ ಆಸಿಫ್ ತಕ್ಷಣವೇ ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ಸಾಧ್ಯತೆಯನ್ನು ಪಾಕಿಸ್ತಾನದ ಮುಖ್ಯ ಆಯ್ಕೆಗಾರ ಹಾರೂನ್ ರಶೀದ್ ತಳ್ಳಿ ಹಾಕಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಶಿಕ್ಷೆಯನ್ನು ಅನುಭವಿಸಿರುವ ಬಟ್ ಹಾಗೂ ಆಸಿಫ್ ಜ.10 ರಂದು ರಾಷ್ಟ್ರೀಯ ಏಕದಿನ ಚಾಂಪಿಯನ್‌ಶಿಪ್‌ನಲ್ಲಿ ಆಡುವ ಮೂಲಕ ದೇಶೀಯ ಕ್ರಿಕೆಟ್‌ಗೆ ವಾಪಸಾಗಲಿದ್ದಾರೆ. ಕರಾಚಿ ಹಾಗೂ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಈ ಇಬ್ಬರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನುಮತಿ ನೀಡಿದೆ.
‘‘ಬಟ್ ಹಾಗೂ ಆಸಿಫ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅವರನ್ನು ಪಾಕ್ ಕ್ರಿಕೆಟ್ ತಂಡಕ್ಕೆ ತಕ್ಷಣವೇ ಆಯ್ಕೆ ಮಾಡುವುದಿಲ್ಲ’’ಎಂದು ರಶೀದ್ ಸ್ಪಷ್ಟಪಡಿಸಿದ್ದಾರೆ.
‘‘ಈ ಇಬ್ಬರು ಆಟಗಾರರು ಒಂದು ವರ್ಷ ಕಾಲ ಕಾಯಬೇಕು. ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಲ್ಲಿ ಆಡಬೇಕು. ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವ ಮೊದಲು ಅವರ ಫಾರ್ಮ್, ಫಿಟ್‌ನೆಸ್ ಹಾಗೂ ನಡವಳಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಿದ್ದೇವೆ’’ಎಂದು ರಶೀದ್ ‘ಜಿಯೋ ಸೂಪರ್’ ಚಾನಲ್‌ಗೆ ತಿಳಿಸಿದರು.







