ಹೋಮಿಯೊಪತಿ, ಜ್ಯೋತಿಷ್ಯ ಬೋಗಸ್; ನೊಬೆಲ್ ಪ್ರಶಸ್ತಿ ಪುರಸ್ಕೃತ ವಿ.ರಾಮಕೃಷ್ಣ
ಚಂಡಿಗಡ,ಜ.6: ಹೋಮಿಯೊಪತಿ ಮತ್ತು ಜ್ಯೋತಿಷ್ಯವನ್ನು ನಿರುಪಯೋಗಿ ಮತ್ತು ಹಾನಿಕಾರಕ ಪದ್ಧತಿಗಳೆಂದು ಬುಧವಾರ ಇಲ್ಲಿ ಬಣ್ಣಿಸಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣ ಅವರು ಇವೆರಡನ್ನೂ ತೀಕ್ಷ್ಣವಾಗಿ ಟೀಕಿಸಿದರಲ್ಲದೆ, ಈ ಬೋಗಸ್ ವಿಷಯಗಳಿಗಿಂತ ವಾಸ್ತವ ವಿಜ್ಞಾನವು ಹೆಚ್ಚು ಆಸಕ್ತಿಪೂರ್ಣವಾಗಿದೆ ಎಂದು ಹೇಳಿದರು.
ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸುವಂತೆ ಸಂವಿಧಾನವು ಹೇಳುತ್ತಿರುವ ದೇಶ ಭಾರತವೊಂದೇ ಆಗಿದೆ ಎಂದು ಬೆಟ್ಟು ಮಾಡಿದ ಅವರು, ದೇಶವು ಇಂತಹ ಕಂದಾಚಾರಗಳ ಬಗ್ಗೆ ಹೆಚ್ಚಿನ ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಯಾವುದೇ ವಿಷಯವನ್ನು ಸಾರ್ವತ್ರೀಕರಿಸಿ ಅದನ್ನು ನಂಬುವ ಮಾನವ ಪ್ರವೃತ್ತಿ ಜ್ಯೋತಿಷ್ಯದ ಹುಟ್ಟಿಗೆ ಕಾರಣವೆಂದ ಅವರು, ಗ್ರಹಗಳು ಮತ್ತು ನಕ್ಷತ್ರಗಳ ಚಲನೆ ನಮ್ಮ ವಿಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಜನನ ಸಮಯವು ಮುಂಬರುವ ವರ್ಷಗಳಲ್ಲಿಯ ಘಟನೆಗಳ ಮೇಲೆ ಪ್ರಭಾವ ಹೊಂದಿರುತ್ತದೆ ಎನ್ನುವುದಕ್ಕೆ ಯಾವುದೇ ಕಾರಣಗಳಿಲ್ಲ ಎಂದರು.
ನಂಬಿಕೆಗಳು ಒಮ್ಮೆ ಆಳವಾಗಿ ಬೇರೂರಿದರೆ ಅವುಗಳನ್ನು ತೊಲಗಿಸುವುದು ತುಂಬ ಕಷ್ಟ ಎಂದ ಅವರು, ಮೂಢನಂಬಿಕೆಗಳ ಮೇಲೆ ಆಧಾರಿತ ಸಂಸ್ಕೃತಿಯು ವೈಜ್ಞಾನಿಕ ಜ್ಞಾನ ಮತ್ತು ವೈಚಾರಿಕ ಚಿಂತನೆಗಳ ಆಧಾರಿತ ಸಂಸ್ಕೃತಿಗಿಂತ ಕೆಟ್ಟದ್ದನ್ನು ಮಾಡುತ್ತದೆ ಎಂದರು.
ಚಂಡಿಗಡದ ಪಂಜಾಬ್ ವಿವಿಯಲ್ಲಿ ಹರ್ ಗೋವಿಂದ್ ಖುರಾನಾ ಉಪನ್ಯಾಸವನ್ನು ನೀಡುತ್ತಿದ್ದ ಅವರು, ಹೋಮಿಯೊಪತಿಯು ಭಾರತದಲ್ಲಿ ಹುಟ್ಟಿದ್ದು ಎಂಬ ಸಾಮಾನ್ಯ ಭಾವನೆಗೆ ವ್ಯತಿರಿಕ್ತವಾಗಿ ಅದು ಜರ್ಮನ್ ವ್ಯಕ್ತಿಯೋರ್ವರು ಆರಂಭಿಸಿದ್ದ ಪದ್ಧತಿ ಎನ್ನುವುದನ್ನು ವಿಜ್ಞಾನಿಗಳೂ ಸ್ಪಷ್ಟಪಡಿಸಿದ್ದಾರೆ ಎಂದ ರಲ್ಲದೆ, ಹೋಮಿಯೊಪತಿ ವೈದ್ಯಪದ್ಧತಿಯಲ್ಲಿ ಆರ್ಸೆನಿಕ್ ಸಂಯುಕ್ತಗಳಿಗೆ ನೀರನ್ನು ಬೆರೆಸಿ ಯಾವ ಪ್ರಮಾಣದಲ್ಲಿ ದುರ್ಬಲಗೊಳಿಸಲಾಗುತ್ತದೆ ಎಂದರೆ ಅದರಲ್ಲಿ ಕೇವಲ ಒಂದು ಅಣುವಿನಷ್ಟು ಆರ್ಸೆನಿಕ್ ಉಳಿದುಕೊಂಡಿರುತ್ತದೆ. ಇದು ನಿಮ್ಮ ಮೇಲೆ ಯಾವುದೇ ಪರಿಣಾಮವನ್ನು ಬೀರದು. ನಿಮ್ಮ ಮನೆಗಳ ನಲ್ಲಿಗಳಲ್ಲಿ ಬರುವ ನೀರು ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆರ್ಸೆನಿಕ್ ಹೊಂದಿರುತ್ತದೆ. ರಸಾಯನ ಶಾಸ್ತ್ರಜ್ಞರಾರೂ ಹೋಮಿಯೊಪತಿಯನ್ನು ನಂಬುವುದಿಲ್ಲ. ಅದು ಕೇವಲ ರೋಗಿಯ ವಿಶ್ವಾಸದ ಆಧಾರದಲ್ಲಿ ಮಾತ್ರ ಕೆಲಸ ಮಾಡುತ್ತದೆ ಎಂದರು.
ಆದರೆ ಆಧುನಿಕ ಜ್ಯೋತಿರ್ವಿಜ್ಞಾನವನ್ನು ಪ್ರಶಂಸಿಸಿದ ಅವರು ಕಪ್ಪು ರಂಧ್ರ,ಅತ್ಯಧಿಕ ಧನತ್ವದ ತಾರೆಗಳು ಇತ್ಯಾದಿ ಮಹತ್ವಪೂರ್ಣ ಶೋಧಗಳು ಇದರಿಂದ ಸಾಧ್ಯವಾಗಿದೆ ಎಂದರು. ವಿಜ್ಞಾನವನ್ನು ನಿಖರವಾಗಿಸುವ ಹೊಣೆಗಾರಿಕೆ ಕೊನೆಗೂ ಇರುವುದು ಮಾನವರ ಮೇಲೆಯೇ ಎಂದ ಅವರು, ವಿಜ್ಞಾನಿಗಳೂ ಮನುಷ್ಯರೇ ಆಗಿದ್ದಾರೆ. ನಮಗೂ ಒಣಪ್ರತಿಷ್ಠೆ,ಮೂಢನಂಬಿಕೆಗಳು ಇತ್ಯಾದಿಗಳು ಇರುತ್ತವೆ. ನಮ್ಮ ಪರಿಕಲ್ಪನೆಗಳನ್ನು ಪ್ರಯೋಗಗಳ ಮೂಲಕ ಪರೀಕ್ಷಿಸುವುದು ಅಗತ್ಯವಾಗಿದ್ದು, ಇದು ನಮ್ಮನ್ನು ಸುಳ್ಳು ನಂಬಿಕೆಗಳಿಂದ ರಕ್ಷಿಸುತ್ತದೆ ಎಂದು ಹೇಳಿದರು.







