ಸೈಯದ್ ಮುಶ್ತಾಕ್ ಅಲಿ ಟ್ರೋಫಿ: ಮಿಂಚಿದ ಇರ್ಫಾನ್ ಪಠಾಣ್, ಹರ್ಭಜನ್

ಪಂಜಾಬ್, ಬರೋಡಾ ಜಯಭೇರಿ
ವಡೋದರ, ಜ.6: ನಾಯಕ ಇರ್ಫಾನ್ ಪಠಾಣ್ ಅವರ ಅಮೋಘ ಆಲ್‌ರೌಂಡ್ ಆಟದ(ಔಟಾಗದೆ 49, 2 ವಿಕೆಟ್) ನೆರವಿನಿಂದ ಬರೋಡಾ ತಂಡ ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯಲ್ಲಿ ಗೋವಾ ತಂಡವನ್ನು 72 ರನ್‌ಗಳ ಅಂತರದಿಂದ ಮಣಿಸಿತು.
ಈ ಗೆಲುವಿನ ಮೂಲಕ ಬರೋಡಾ ತಂಡ ಟೂರ್ನಿಯಲ್ಲಿ ಸತತ ಮೂರನೆ ಗೆಲುವು ಸಾಧಿಸಿ ಅಜೇಯ ದಾಖಲೆ ಕಾಯ್ದುಕೊಂಡಿತು. ಬುಧವಾರ ಇಲ್ಲಿನ ಮೋತಿಬಾಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಬರೋಡಾ 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 154 ರನ್ ಗಳಿಸಿತು. ಗೆಲುವಿಗೆ ಸ್ಪರ್ಧಾತ್ಮಕ ಗುರಿ ಪಡೆದಿದ್ದ ಗೋವಾ ತಂಡವನ್ನು 15.4 ಓವರ್‌ಗಳಲ್ಲಿ ಕೇವಲ 82 ರನ್‌ಗಳಿಗೆ ಆಲೌಟ್ ಮಾಡಿದ ಬರೋಡಾ ನಾಲ್ಕು ಅಂಕವನ್ನು ಬಾಚಿಕೊಂಡಿತು.
ಅಗ್ರ ಕ್ರಮಾಂಕದಲ್ಲಿ ಪಠಾಣ್ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ ಔಟಾಗದೆ 49 ರನ್ ಗಳಿಸಿದರು. ಆರಂಭಿಕ ದಾಂಡಿಗ ಕೇದಾರ್ ದೇವ್‌ಧರ್(39) ಹಾಗೂ ಹಾರ್ದಿಕ್ ಪಾಂಡ್ಯ(ಔಟಾಗದೆ 38) ಉಪಯುಕ್ತ ಕೊಡುಗೆ ನೀಡಿದರು.
3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 83 ರನ್ ಸೇರಿಸಿದ ಇರ್ಫಾನ್ ಹಾಗೂ ಪಾಂಡ್ಯ ಬರೋಡಾ ತಂಡ ಉತ್ತಮ ಸ್ಕೋರ್ ಗಳಿಸಲು ನೆರವಾದರು. ಸವಾಲಿನ ಮೊತ್ತವನ್ನು ಬೆನ್ನಟ್ಟ ತೊಡಗಿದ ಗೋವಾ ತಂಡದ ಪರ ದೀಪರಾಜ್ ಗಾಂವ್ಕರ್(48) ಅಗ್ರ ಸ್ಕೋರರ್ ಎನಿಸಿಕೊಂಡರು. ಉಳಿದ ದಾಂಡಿಗರು ತರಗೆಲೆಯಂತೆ ಉದುರಿದರು.
ವೇಗದ ಬೌಲರ್‌ಗಳಾದ ಇರ್ಫಾನ್ ಪಠಾಣ್, ರಿಷಿ ಅರೋಟೆ ಹಾಗೂ ಪಾಂಡ್ಯ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.
ಮಿಂಚಿದ ಹರ್ಭಜನ್: ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಪರ್ಗತ್ ಸಿಂಗ್(ಔಟಾಗದೆ 60) ಸಾಹಸದ ನೆರವಿನಿಂದ ಪಂಜಾಬ್ ತಂಡ ಜಾರ್ಖಂಡ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು.
ಟಾಸ್ ಜಯಿಸಿದ ಪಂಜಾಬ್ ತಂಡ ಜಾರ್ಖಂಡ್‌ನ್ನು 104 ರನ್‌ಗೆ ನಿಯಂತ್ರಿಸಿತು. ಗೆಲ್ಲಲು ಸಾಧಾರಣ ಸವಾಲು ಪಡೆದ ಪಂಜಾಬ್ 17.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಆರಂಭಿಕ ದಾಂಡಿಗ ಪರ್ಗತ್ ಸಿಂಗ್ ಪಂಜಾಬ್‌ಗೆ ಟೂರ್ನಿಯಲ್ಲಿ ಎರಡನೆ ಗೆಲುವು ತಂದುಕೊಟ್ಟರು.
ಮಧ್ಯಪ್ರದೇಶಕ್ಕೆ ಸುಲಭ ಜಯ: ವಡೋದರದಲ್ಲಿ ನಡೆದ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ರೈಲ್ವೇಸ್ ತಂಡವನ್ನು ಸುಲಭವಾಗಿ ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ರೈಲ್ವೇಸ್ ಅಶ್ವಿನ್ ದಾಸ್(4-10) ದಾಳಿಗೆ ಸಿಲುಕಿ 103 ರನ್‌ಗೆ ಆಲೌಟಾಯಿತು. ಜಲಜ್ ಸಕ್ಸೇನಾ(ಔಟಾಗದೆ 37) ಮಧ್ಯಪ್ರದೇಶ ತಂಡ 16.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಲು ನೆರವಾದರು.
ವಿದರ್ಭಕ್ಕೆ ತಲೆಬಾಗಿದ ತಮಿಳುನಾಡು: ಗ್ರೂಪ್ ಎ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ ಉಪಯುಕ್ತ ಜೊತೆಯಾಟ ನಡೆಸಿದ ವಿಕೆಟ್‌ಕೀಪರ್ ಜಿತೇಶ್ ಶರ್ಮ ಹಾಗೂ ನಾಯಕ ಫೈಝ್ ಫಝಲ್ ವಿದರ್ಭಕ್ಕೆ 7 ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಬುಧವಾರ ನಡೆದ ಪಂದ್ಯದಲ್ಲಿ 151 ರನ್ ಬೆನ್ನಟ್ಟಿದ ವಿದರ್ಭ ತಂಡ ಜಿತೇಶ್ ಶರ್ಮ(73 ರನ್, 47 ಎಸೆತ) ಹಾಗೂ ಫಝಲ್(45 ರನ್, 37 ಎಸೆತ) ಮೊದಲ ವಿಕೆಟ್‌ಗೆ ಸೇರಿಸಿದ 87 ರನ್ ಜೊತೆಯಾಟದ ನೆರವಿನಿಂದ ಸುಲಭ ಗೆಲುವು ದಾಖಲಿಸಿತು.
ಹರ್ಯಾಣಕ್ಕೆ ಸೋಲು: ಹೈದರಾಬಾದ್ ತಂಡ ಹರ್ಯಾಣದ ವಿರುದ್ಧ 35 ರನ್‌ಗಳ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ 2ನೆ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದ ಹರ್ಯಾಣ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು. ಮಧ್ಯಮ ಸರದಿಯಲ್ಲಿ ಆಡಿದ ನಾಯಕ ವೀರೇಂದ್ರ ಸೆಹ್ವಾಗ್ ಕೇವಲ 9 ರನ್‌ಗೆ ಔಟಾಗಿ ನಿರಾಸೆಗೊಳಿಸಿದರು.
ಪಂದ್ಯಗಳ ಫಲಿತಾಂಶ
ವಡೋದರ: ಗೋವಾ ವಿರುದ್ಧ ಬರೋಡಾಕ್ಕೆ 72 ರನ್ ಜಯ
ನಾಗ್ಪುರ: ಬಂಗಾಳದ ವಿರುದ್ಧ ಗುಜರಾತ್‌ಗೆ 8 ವಿಕೆಟ್‌ಗಳ ಜಯ
ನಾಗ್ಪುರ: ಹರ್ಯಾಣದ ವಿರುದ್ಧ ಹೈದರಾಬಾದ್‌ಗೆ 35 ರನ್ ಜಯ
ಕೊಚ್ಚಿ: ಜಾರ್ಖಂಡ್ ವಿರುದ್ಧ ಪಂಜಾಬ್‌ಗೆ 7 ವಿಕೆಟ್ ಗೆಲುವು
ವಡೋದರ: ಅಸ್ಸಾಂ ವಿರುದ್ಧ ದಿಲ್ಲಿಗೆ 8 ವಿಕೆಟ್ ಗೆಲುವು
ಕೊಚ್ಚಿ: ಜಮ್ಮು-ಕಾಶ್ಮೀರದ ವಿರುದ್ಧ ತ್ರಿಪುರಾಕ್ಕೆ 4 ವಿಕೆಟ್ ಜಯ
ಕೊಚ್ಚಿ: ಸೌರಾಷ್ಟ್ರದ ವಿರುದ್ಧ ಕೇರಳಕ್ಕೆ 50 ರನ್ ಜಯ
ವಡೋದರ: ರೈಲ್ವೇಸ್ ವಿರುದ್ಧ ಮಧ್ಯಪ್ರದೇಶಕ್ಕೆ 6 ವಿಕೆಟ್ ಗೆಲುವು
ನಾಗ್ಪುರ: ತಮಿಳುನಾಡು ವಿರುದ್ಧ ವಿದರ್ಭಕ್ಕೆ 7 ವಿಕೆಟ್ ಗೆಲುವು







