ಟ್ರಂಪ್ ಬ್ರಿಟನ್ ಪ್ರವೇಶ ನಿಷೇಧಿಸಬೇಕೇ?
ಲಂಡನ್, ಜ. 6: ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಬ್ರಿಟನ್ ಪ್ರವೇಶಕ್ಕೆ ನಿಷೇಧ ವಿಧಿಸಬೇಕೆ ಎಂಬ ಬಗ್ಗೆ ಬ್ರಿಟನ್ ಸಂಸದರು ಜನವರಿ 18 ರಂದು ಚರ್ಚೆ ನಡೆಸಲಿದ್ದಾರೆ.
ಟ್ರಂಪ್‌ರ ಬ್ರಿಟನ್ ಪ್ರವೇಶದ ಮೇಲೆ ನಿಷೇಧ ವಿಧಿಸಬೇಕೆಂದು ಕೋರುವ ಮನವಿಗೆ 5.6 ಲಕ್ಷಕ್ಕೂ ಅಧಿಕ ಮಂದಿ ಸಹಿ ಹಾಕಿದ ಬಳಿಕ ಬ್ರಿಟನ್ ಸಂಸತ್ ಈ ನಿರ್ಧಾರ ತೆಗೆದುಕೊಂಡಿದೆ. ಯಾವುದಾದರೂ ವಿಷಯದ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಯಬೇಕಾದರೆ, ಅಂಥ ಮನವಿಗೆ ಒಂದು ಲಕ್ಷ ಮಂದಿ ಸಹಿ ಹಾಕಬೇಕಾಗಿರುವುದು ಕಾನೂನಿನ ಆವಶ್ಯಕತೆಯಾಗಿದೆ. ಆದರೆ, ಟ್ರಂಪ್ ಪ್ರಕರಣದಲ್ಲಿ ಕನಿಷ್ಠ ಆವಶ್ಯಕತೆಗಿಂತ ಹಲವು ಪಟ್ಟು ಹೆಚ್ಚು ಮಂದಿ ಸಹಿ ಹಾಕಿದ್ದಾರೆ.
ಟ್ರಂಪ್ ಪ್ರವೇಶಕ್ಕೆ ನಿಷೇಧ ವಿಧಿಸುವುದನ್ನು ವಿರೋಧಿಸುವ ಪ್ರತ್ಯೇಕ ಮನವಿಗೆ ಸುಮಾರು 40,000 ಮಂದಿ ಸಹಿ ಹಾಕಿದ್ದಾರೆ.
ಮುಸ್ಲಿಮರ ವಿರುದ್ಧ ಅಮೆರಿಕದ ಬಿಲಿಯಾಧಿಪತಿ ಹಲವಾರು ವಿವಾದಾಸ್ಪದ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಪ್ರವೇಶ ನಿಷೇಧ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮುಸ್ಲಿಮರಿಗೆ ಅಮೆರಿಕ ಪ್ರವೇಶಿಸಲು ಅನುಮತಿ ನೀಡಬಾರದು ಎಂಬ ಟ್ರಂಪ್‌ರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿರುವುದನ್ನು ಸ್ಮರಿಸಬಹುದು.