ವರದಿಗಾರ್ತಿಯೊಂದಿಗೆ ಅಸಭ್ಯ ವರ್ತನೆ: ಗೇಲ್‌ಗೆ ದಂಡ

ಮೆಲ್ಬೋರ್ನ್, ಜ.6: ಟಿವಿ ವಾಹಿನಿಯ ವರದಿಗಾರ್ತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕಾಗಿ ವೆಸ್ಟ್‌ಇಂಡೀಸ್‌ನ ದಾಂಡಿಗ ಕ್ರಿಸ್ ಗೇಲ್‌ಗೆ ದಂಡ ವಿಧಿಸಲಾಗಿದ್ದು, ಆಸ್ಟ್ರೇಲಿಯದ ದೇಶೀಯ ಟ್ವೆಂಟಿ-20 ಟೂರ್ನಿ ಬಿಗ್‌ಬ್ಯಾಶ್ ಲೀಗ್‌ನಿಂದ ನಿಷೇಧದ ಭೀತಿ ಎದುರಿಸುತ್ತಿದ್ದಾರೆ.
ಸೋಮವಾರ ಬಿಬಿಎಲ್‌ನಲ್ಲಿ 15 ಎಸೆತಗಳಲ್ಲಿ 41 ರನ್‌ಗಳನ್ನು ಸಿಡಿಸಿದ ನಂತರ ಟೆನ್ ನೆಟ್‌ವರ್ಕ್‌ನ ವರದಿಗಾರ್ತಿ ಮೆಲ್ ಮೆಕ್ಲಾಲಿನ್ ಅವರು ಗೇಲ್ ಸಂದರ್ಶನ ಮಾಡಿದ್ದರು. ಆ ಸಂದರ್ಭದಲ್ಲಿ ಗೇಲ್ ತಮ್ಮಾಂದಿಗೆ ಮದ್ಯಪಾನ ಮಾಡಲು ಬರಲು ವರದಿಗಾರ್ತಿಯನ್ನು ಆಹ್ವಾನಿಸಿದ್ದರು.
ಗೇಲ್‌ರ ಈ ವರ್ತನೆಗೆ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಸಹಿತ ಎಲ್ಲೆಡೆಯಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಗೇಲ್ ಘಟನೆಯ ಬಗ್ಗೆ ಕ್ಷಮೆ ಕೋರಿದ್ದರು. ತಕ್ಷಣವೇ ಅಮಾನತುಗೊಳ್ಳುವುದರಿಂದ ಬಚಾವಾಗಿದ್ದರು.
ತನ್ನ ಅತಿರೇಕದ ವರ್ತನೆಗೆ ಗೇಲ್ ಪ್ರತಿನಿಧಿಸುತ್ತಿರುವ ತಂಡ ಮೆಲ್ಬೋರ್ನ್ ರೆನೆಗೆಡ್ಸ್ ತಂಡ ಗೇಲ್‌ಗೆ 10,000 ಅಮೆರಿಕನ್ ಡಾಲರ್ ದಂಡ ವಿಧಿಸಿದೆ. ಕ್ರಿಕೆಟ್ ಆಸ್ಟ್ರೇಲಿಯವು ಬಿಬಿಎಲ್‌ನ ಮುಂದಿನ ಆವೃತ್ತಿಗಳಲ್ಲಿ ಗೇಲ್‌ಗೆ ನಿಷೇಧ ಹೇರುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.







