ಫೆ.27ಕ್ಕೆ ಸಂಜಯ್ ದತ್ ಬಿಡುಗಡೆ

ಮುಂಬೈ, ಜ.6: ನಟ ಸಂಜಯ್ ದತ್ ಫೆ.27ರಂದು ಜೈಲಿನಿಂದ ಹೊರ ಬರಲಿದ್ದಾರೆ. ಮುಂಬೈ ಸರಣಿ ಸ್ಫೋಟ ಪ್ರಕರಣಗಳಲ್ಲಿ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಮಹಾರಾಷ್ಟ್ರ ಸರಕಾರ ಮಾಫಿ ಮಾಡಿದೆ.
1993ರ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್‌ರ ಶಾಮೀಲಾತಿಗಾಗಿ ಅವರಿಗೆ 5 ವರ್ಷಗಳ ಶಿಕ್ಷೆ ವಿಧಿಸ ಲಾಗಿತ್ತು. 2013ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಅದನ್ನು ದೃಢಪಡಿಸಿತ್ತು.
ಕೊನೆಯ ಕ್ಷಣದ ಅಡಚಣೆಯ ಹೊರತಾಗಿ ಸಂಜಯ್ ಉಳಿದಿರುವ 42 ತಿಂಗಳ ಶಿಕ್ಷಾವಧಿ ಪೂರೈಸಿದ ಬಳಿಕ ಬಿಡುಗಡೆಗೊಳ್ಳಲಿದ್ದಾರೆಂದು ಮೂಲಗಳು ಸೂಚನೆ ನೀಡಿದ್ದವು.
ದತ್,ಟಾಡಾ ಅನ್ವಯದ ಭಯೋತ್ಪಾದನೆ ಆರೋಪದಿಂದ ಖುಲಾಸೆಗೊಂಡಿದ್ದರೂ, ಅನಧಿಕೃತ ಆಯುಧ ಹೊಂದಿದ್ದ ಪ್ರಕರಣದಲ್ಲಿ ಅವರು ಅಪರಾಧಿಯೆಂದು ಸಾಬೀತಾಗಿತ್ತು. 1992, ಡಿ.6ರಂದು ಬಾಬ್ರಿ ಮಸೀದಿ ಧ್ವಂಸದ ಬಳಿಕ ಮುಂಬೈಯನ್ನು ಆವರಿಸಿದ್ದ ಕೋಮು ಹಿಂಸಾಚಾರದ ವೇಳೆ, ತನ್ನ ಕುಟುಂಬದ ರಕ್ಷಣೆಗಾಗಿ ಅದನ್ನು ಪಡೆದಿದ್ದೆನೆಂದು ಅವರು ಪ್ರತಿಪಾದಿಸಿದ್ದರು.
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದತ್ತ್‌ರ ಜಾಮೀನನ್ನು ರದ್ದುಪಡಿಸಲಾಗಿತ್ತು ಹಾಗೂ ನಾಲ್ಕು ವಾರಗಳೊಳಗೆ ಶರಣಾಗುವಂತೆ ಅವರಿಗೆ ಆದೇಶಿಸಲಾಗಿತ್ತು. 2013ರ ಮೇ.16ರಂದು ದತ್ತ್ ಶರಣಾದ ಬಳಿಕ ಅವರನ್ನು ಅರ್ಥರ್ ರಸ್ತೆಯ ಕೇಂದ್ರ ಕಾರಾಗೃಹದಲ್ಲಿಡಲಾಗಿತ್ತು.
ಒಂದು ವಾರದ ಬಳಿಕ ಸಂಜಯ್ ಪುಣೆಯ ಯರವಾಡ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದರು. ಆ ಬಳಿಕ ಅವರು ಅಲ್ಲೇ ಇದ್ದು, ಉತ್ತಮ ನಡತೆಯ ಕೈದಿಯೆಂಬ ಹೆಸರು ಗಳಿಸಿದ್ದರು.
ಒಟ್ಟು 5 ವರ್ಷಗಳ ಶಿಕ್ಷೆಯಲ್ಲಿ ದತ್ತ್, 18 ತಿಂಗಳನ್ನು ವಿಚಾರಣಾಧೀನ ಕೈದಿಯಾಗಿ ಕಳೆದಿದ್ದರು. ಅವರು ಬಳಿಕ ಪೂರೈಸಬೇಕಾಗಿದ್ದ 42 ತಿಂಗಳ ಶಿಕ್ಷೆಯ ಅವಧಿ ಮುಕ್ತಾಯಕ್ಕೆ ಬಂದಿದೆ.
ಜೈಲು ವಾಸದ ಅವಧಿಯಲ್ಲಿ ಸಂಜಯ್‌ಗೆ ವಿವಿಧ ಕಾರಣಗಳಿಗಾಗಿ ಪರೋಲ್ ನೀಡಲಾಗಿತ್ತು. ಅದು ಹಲವರಿಂದ ಟೀಕೆಗೊಳಗಾಗಿತ್ತು. ಕೆಲವು ಗಣ್ಯರು ದತ್ತ್‌ರ ಬಿಡುಗಡೆಗೆ ಒತ್ತಾಯಿಸಿದ್ದರು.







