ಮೊದಲು ಒಂದು ಶತಕ ... ಈಗ ಹತ್ತು ಶತಕ. ! ಪ್ರಣವ್‌ಗೆ ಸಾಥ್ ನೀಡಿದ ಬ್ಯಾಟ್ಸ್‌ಮನ್‌ಗಳ ಮುಕ್ತಮಾತು

ಕಲ್ಯಾಣ್, ಜ.6: ಮುಂಬೈನ ಶಾಲಾ ವಿದ್ಯಾರ್ಥಿ ಕೆ.ಸಿ. ಗಾಂಧಿ ಸ್ಕೂಲ್‌ನ ಪ್ರಣವ್ ಧನವಾಡೆ ಆರ್ಯ ಗುರುಕುಲ ಸ್ಕೂಲ್ ವಿರುದ್ಧದ ಎಚ್‌ಟಿ ಭಂಡಾರಿ ಟ್ರೋಫಿ ಇಂಟರ್ ಸ್ಕೂಲ್ ಪಂದ್ಯದಲ್ಲಿ ವಿಶ್ವ ದಾಖಲೆಯ 1,009 ರನ್ ಗಳಿಸಿದ್ದರು.
ಪ್ರಣವ್ ಧನವಾಡೆ ಮೊದಲು ಒಂದು ಶತಕ ದಾಖಲಿಸಿದ್ದರು. ಆದರೆ ಒಮ್ಮೆಲೇ 10 ಶತಕ ದಾಖಲಿಸಿ ವಿಶ್ವದ ಗಮನ ಸೆಳೆದರು. ಆದರೆ ಇವರಿಗೆ ಈ ದಾಖಲೆಗೆ ಸಾಥ್ ನೀಡಿದ್ದ ಇಬ್ಬರು ಹುಡುಗರ ಶತಕದ ಮಸುಕಾಗಿದೆ.
ಆರಂಭಿಕ ದಾಂಡಿಗ ಆಕಾಶ್ ಸಿಂಗ್ ಮತ್ತು ಪ್ರಣವ್ ಮೊದಲ ವಿಕೆಟ್‌ಗೆ 546 ರನ್‌ಗಳ ಜೊತೆಯಾಟ ನೀಡಿದ್ದರು. ಆಕಾಶ್ ಸಿಂಗ್ ಅವರು ಪ್ರಣವ್‌ಗೆ 140 ನಿಮಿಷಗಳ ಆಟಕ್ಕೆ ಸಾಥ್ ನೀಡಿದ್ದರು. ಆಕಾಶ್ ಸಿಂಗ್ 140 ಎಸೆತಗಳನ್ನು ಎದುರಿಸಿ 29ಬೌಂಡರಿಗಳ ಸಹಾಯದಿಂದ 173 ರನ್ ದಾಖಲಿಸಿದ್ದರು.
ಆಕಾಶ್ ಸಿಂಗ್ ಅವರು ಹರ್ಷಲ್ ಜಾಧವ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ ಬಳಿಕ ಸಿದ್ದೇಶ ಪಾಟೀಲ್ ಕ್ರೀಸ್‌ಗೆ ಆಗಮಿಸಿದ್ದರು. ಪಾಟೀಲ್ ಮತ್ತು ಪ್ರಣವ್ ಎರಡನೆ ವಿಕೆಟ್‌ಗೆ 530 ರನ್‌ಗಳ ಜೊತೆಯಾಟ ನೀಡಿದ್ದರು. ಇದರೊಂದಿಗೆ ಮೊದಲ ಬಾರಿ ಪ್ರಥಮ ಮತ್ತು ಎರಡನೆ ವಿಕೆಟ್‌ಗೆ ತಲಾ ಐದು ಶತಕಗಳ ಜೊತೆಯಾಟ ದಾಖಲಾಗಿತ್ತು.
ಪಾಟೀಲ್ 143 ನಿಮಿಷಗಳ ಬ್ಯಾಟಿಂಗ್‌ನಲ್ಲಿ 92 ಎಸೆತಗಳನ್ನು ಎದುರಿಸಿದ್ದರು. 19 ಬೌಂಡರಿಗಳನ್ನು ಒಳಗೊಂಡ 137 ರನ್ ಗಳಿಸುವ ಹೊತ್ತಿಗೆ ಆಯೂಷ್ ದುಬೆ ಅವರು ಎಲ್‌ಬಿಡಬ್ಲು ಬಲೆಗೆ ಬೀಳಿಸಿದ್ದರು.
ಪ್ರಣವ್ ಜೊತೆ ಸುದೀರ್ಘ ಇನಿಂಗ್ಸ್ ಕಟ್ಟಿದ ಬಾಲಕರು ಖುಶಿಯಲ್ಲಿದ್ದಾರೆ. ‘‘ ನಾವು ಪ್ರಣವ್ ಜೊತೆ ಸುದೀರ್ಘ ಅವಧಿಯ ಬ್ಯಾಟಿಂಗ್ ನಡೆಸಲು ಮಾನಸಿಕವಾಗಿ ಸಿದ್ದರಾಗಿ ಕ್ರೀಡಾಂಗಕ್ಕೆ ಇಳಿದಿದ್ದೆವು. ಪ್ರಣವ್‌ಗೆ ವಿಶ್ವದಾಖಲೆ ಬರೆಯಲು ನಾವು ನಮ್ಮಿಂದ ಸಾಧ್ಯವಿರುವ ನೆರವು ನೀಡಿರುವುದಾಗಿ ಆಕಾಶ್ ಹೇಳುತ್ತಾರೆ.
‘‘ ಭಾರೀ ಮೊತ್ತದ ಸ್ಕೋರ್ ದಾಖಲಿಸುವ ಸಾಮರ್ಥ್ಯ ಪ್ರಣವ್ ಅವರಿಗಿರುವ ವಿಚಾರ ನಮಗೆ ಗೊತ್ತಿತ್ತು.ಪ್ರಣವ್ 400 ರನ್ ಗಡಿ ದಾಟಿದ ಬಳಿಕ ಅವರು ವಿಶ್ವದಾಖಲೆಯನ್ನೆಲ್ಲಾ ಅಳಿಸಿ ಹಾಕುವ ಸಾಧ್ಯತೆ ಕಂಡು ಬಂದಿತ್ತು’’ ಎನ್ನುತ್ತಾರೆ ಸಿದ್ದೇಶ್ ಪಾಟೀಲ್.
‘‘ಸಿದ್ದೇಶ್ ಅವರು ಪ್ರಣವ್‌ಗಿಂದ ಹೆಚ್ಚು ಶತಕ ದಾಖಲಿಸಿದವರು. ಪ್ರಣವ್ ಈ ಮೊದಲು ಒಂದು ಶತಕ ದಾಖಲಿಸಿದ್ದರು. ಆದರೆ ಒಂದೇ ಬಾರಿ ದಶ ಶತಕ ದಾಖಲಿಸುವ ಮೂಲಕ ನಮ್ಮನ್ನು ಹಿಂದಕ್ಕೆ ತಳ್ಳಿದ್ದಾರೆ’’ ಎಂದು ಆಕಾಶ್ ಹಾಸ್ಯ ಚಟಾಕಿ ಹಾರಿಸಿದರು.
ವಿಶ್ವದಾಖಲೆಯ ಬಳಿಕ ಪ್ರಣವ್ ತನ್ನ ತಂದೆಯ ರಿಕ್ಷಾದಲ್ಲಿ ಮನೆಗೆ ತೆರಳಿದರು.





