ಪೇಜಾವರ ಶ್ರೀಗಳ ಪ್ರೇಮವಾದ
ಮಾನ್ಯರೆ,
ಇತ್ತೀಚೆಗೆ ಪೇಜಾವರ ಶ್ರೀ ಅವರು ‘ತಾನು ಕೋಮುವಾದಿಯಲ್ಲ ಪ್ರೇಮವಾದಿ’ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಪ್ರೇಮ ಎನ್ನುವುದಕ್ಕೆ ಅವರು ನೀಡುವ ಮಾನದಂಡಗಳನ್ನು ಸ್ಪಷ್ಟಪಡಿಸುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ, ದ್ವೇಷವನ್ನೇ ಪ್ರೀತಿಯೆಂದು, ಪ್ರೀತಿಯನ್ನೇ ದ್ವೇಷವೆಂದು ಜನರು ತಪ್ಪು ತಿಳಿದು, ಅವರ ದಾರಿಯನ್ನು ಅನುಸರಿಸುವ ಅಪಾಯವಿದೆ. ಶೂದ್ರರಿಗೆ ಒಂದು ಪಂಕ್ತಿ, ಬ್ರಾಹ್ಮಣರಿಗೊಂದು ಪಂಕ್ತಿ ಯಾವ ಪ್ರೇಮವನ್ನು ಸಾಬೀತು ಪಡಿಸುತ್ತದೆ ಎನ್ನುವುದನ್ನು ಪೇಜಾವರ ಶ್ರೀಗಳು ಹೇಳಬೇಕು. ಪ್ರೇಮವೆನ್ನುವುದು ಎಲ್ಲ ಭೇದಗಳನ್ನು ಅಳಿಸಿ ಜನರನ್ನು ಒಟ್ಟಾಗಿಸುತ್ತದೆ. ಆದರೆ ಪೇಜಾವರ ಶ್ರೀಗಳ ಪ್ರೇಮ, ಜನರನ್ನು ಪಂಕ್ತಿಯಾಗಿ ವಿಭಜಿಸುತ್ತದೆ.
ಇತ್ತೀಚೆಗೆ ಕೃಷ್ಣ ಮಠದಲ್ಲಿ ಮಡೆಸ್ನಾನವನ್ನು ಅನುಸರಿಸಲಾಯಿತು. ಬ್ರಾಹ್ಮಣರ ಎಂಜಲು ಶ್ರೇಷ್ಠ, ರೋಗನಿವಾರಕ ಎನ್ನುವ ಅಂಶವನ್ನು ಎತ್ತಿ ಹಿಡಿಯುವ ಈ ಆಚರಣೆ ಯಾವ ರೀತಿಯ ಪ್ರೇಮವನ್ನು ಬೋಧಿಸುತ್ತದೆ ಎನ್ನುವುದನ್ನು ಪೇಜಾವರಶ್ರೀಗಳು ಸ್ಪಷ್ಟಪಡಿಸಬೇಕು. ಮಡೆಸ್ನಾನ ಅಜ್ಞಾನ, ಜಾತಿಭೇದ, ವೌಢ್ಯಗಳನ್ನು ಎತ್ತಿ ಹಿಡಿಯುತ್ತದೆ. ಇದಕ್ಕೂ ಪ್ರೇಮಕ್ಕೂ ಏನು ಸಂಬಂಧ? ಬಾಬರಿ ಮಸೀದಿ ಧ್ವಂಸ ಸರಿ ಎನ್ನುವುದು ಯಾವ ಪ್ರೇಮವಾದ? ಇದರಿಂದಾಗಿ ಸಹಸ್ರಾರು ಜನರು ಪ್ರಾಣಕಳೆದುಕೊಂಡರು. ಪ್ರೇಮ ಜನರ ಪ್ರಾಣವನ್ನು ರಕ್ಷಿಸುತ್ತದೆಯೇ ಹೊರತು, ಅವರನ್ನು ಕೊಲ್ಲುವುದಿಲ್ಲ. ಆದರೆ, ಧ್ವಂಸವನ್ನು ಪೇಜಾವರರು ಪ್ರೇಮವೆಂದು ಘೋಷಿಸುತ್ತಾರೆ. ಪ್ರೇಮ ಯಾವತ್ತೂ ಕಟ್ಟುತ್ತದೆಯೇ ಹೊರತು, ಕೆಡಹುವುದಿಲ್ಲ. ಪೇಜಾವರಶ್ರೀಗಳು ಜನರ ಈ ಅನುಮಾನಗಳಿಗೆ ಉತ್ತರಿಸುವರೇ?
-





