ನಿರಂಜನ್ ಕುಟುಂಬಕ್ಕೆ ಇನ್ನಷ್ಟು ಪರಿಹಾರ ಸಿಗಲಿ
ಮಾನ್ಯರೆ,
ಇತ್ತೀಚೆಗೆ ಪಠಾಣ್‌ಕೋಟ್‌ನಲ್ಲಿ ಉಗ್ರರ ವಿರುದ್ಧ ಹೋರಾಡುತ್ತಾ ಲೆ. ಕ. ನಿರಂಜನ್ ಅವರು ಹುತಾತ್ಮರಾದರು. ಇನ್ನೂ ಎಳೆ ವಯಸ್ಸು. ಕುಟುಂಬಕ್ಕೆ ಅವರ ಅಗತ್ಯ ತುಂಬಾ ಇತ್ತು. ಇಂತಹ ಸಂದರ್ಭದಲ್ಲಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಈ ತ್ಯಾಗಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲ. ಅವರ ಕುಟುಂಬವೂ ಈ ತ್ಯಾಗಕ್ಕೆ ಹೆಮ್ಮೆ ಪಟ್ಟುಕೊಂಡಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಸರಕಾರ ಅವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಿರುವುದು ಶ್ಲಾಘನೀಯ.
ಒಬ್ಬ ಕ್ರಿಕೆಟಿಗ ಭಾರೀ ಸಾಧನೆ ಮಾಡಿದಾಗ ಅವನಿಗೆ ಕಣ್ಣು ಮುಚ್ಚಿ ಸರಕಾರ ಕೋಟ್ಯಂತರ ಕೊಡುಗೆಗಳನ್ನು ನೀಡುತ್ತದೆ. ಹೀಗಿರುವಾಗ ನಿರಂಜನ್ ಅವರು ಕೊಟ್ಟಿರುವುದು ತನ್ನ ಪ್ರಾಣವನ್ನು. ಇದಕ್ಕೆ ಸರಿಸಾಟಿ ಯಾವುದೂ ಇಲ್ಲ. ಅವರದು ಆಟವಲ್ಲ, ಯುದ್ಧ. ಆದುದರಿಂದ, ಕನಿಷ್ಠ ಒಂದು ಕೋಟಿ ರೂಪಾಯಿಯನ್ನಾದರೂ ಕೇಂದ್ರ ಸರಕಾರ ಪರಿಹಾರವಾಗಿ ಅವರ ಕುಟುಂಬಕ್ಕೆ ನೀಡಬೇಕು. ಇದು ಅಧಿಕಾರಿಗಳಿಗೆ ಮಾತ್ರವಲ್ಲ, ಜವಾನರು ಪ್ರಾಣಕೊಟ್ಟರೂ ಕನಿಷ್ಟ ಒಂದು ಕೋಟಿ ರೂಪಾಯಿ ಪರಿಹಾರವನ್ನು ಕೊಡುವುದಕ್ಕೆ ಸರಕಾರ ಮುಂದಾಗಬೇಕು. ಜೀವವೆನ್ನುವುದು ಮರಳಿ ಬರುವುದಿಲ್ಲ. ಅವರ ಕುಟುಂಬಕ್ಕೆ ಈ ದೇಶದ ಜನರೇ ಆಸರೆ. ಆದುದರಿಂದ, ಸರಕಾರ, ಹುತಾತ್ಮ ಸೈನಿಕರಿಗೆ ನೀಡುವ ಪರಿಹಾರದ ಕುರಿತಂತೆ ಮರು ಆಲೋಚನೆ ಮಾಡಬೇಕು.





