ಪಶ್ಚಿಮವಾಹಿನಿ ಯೋಜನೆ ಮತ್ತೆ ಅನುಷ್ಠಾನಕ್ಕೆ ಯತ್ನ: ಸಚಿವ ರೈ

ಸಜಿಪಮೂಡ ಏತ ನೀರಾವರಿ ಯೋಜನೆ ಉದ್ಘಾಟನೆ
ಬಂಟ್ವಾಳ, ಜ.6: ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಪಶ್ಚಿಮ ವಾಹಿನಿ ಯೋಜನೆಗೆ ಸರಕಾರದ ಮೇಲೆ ಒತ್ತಡ ತಂದು ಪುನಃ ಅನುಷ್ಠಾನ ಕ್ರಮಕ್ಕೆ ಮುಂದಾಗಬೇಕಾಗಿದೆ. ನದಿಗೆ ಅಲ್ಲಲ್ಲಿ ಕಿರು ಅಣೆಕಟ್ಟು ನಿರ್ಮಿಸುವುದರಿಂದ ಅಂತ ರ್ಜಲದ ಮಟ್ಟದಲ್ಲಿ ಹೆಚ್ಚಳವಾಗಲಿದೆ. ನೀರಿನ ಹರಿವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಜನರಿಗೆ ನೀರಿನ ಸೌಕರ್ಯ ಹೆಚ್ಚುವುದು. ಸಜಿಪ ಮೂಡ ಏತ ನೀರಾವರಿ ಯೋಜನೆಯಿಂದ ಇಂತಹ ಪ್ರಯೋಜನ ಜನತೆಗೆ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
3.80 ಕೋ.ರೂ. ವೆಚ್ಚದ ಸಜಿಪ ಮೂಡ ಏತ ನೀರಾವರಿ ಯೋಜನೆಗೆ ಬುಧವಾರ ಚಾಲನೆ ನೀಡಿ ಬಳಿಕ ಸುಭಾಷ್ ನಗರದ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ನಡೆದ ರೈತಾಪಿ ವರ್ಗದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸಜಿಪಮೂಡ ಏತ ನೀರಾವರಿ ಯೋಜನೆ ಸಂಪೂರ್ಣ ಗೊಳ್ಳಲು ಇನ್ನಷ್ಟು ಕೆಲಸಗಳು ಆಗಬೇಕಾಗಿದೆ. ಪ್ರಸ್ತುತ ಒಂದು ಹಂತಕ್ಕೆ ಬಂದಿರುವ ಈಯೋಜನೆಯ ಮುಂದುವರಿದ ಕಾಮಗಾ ರಿಗೆ ಅವಶ್ಯ ಅನುದಾನ ಒದಗಿಸಲಾ ಗುವುದು. ಆ ಮೂಲಕ ಇನ್ನಷ್ಟು ಹೆಚ್ಚಿನ ಪ್ರದೇಶಕ್ಕೆ ನೀರು ಒದಗಿಸುವ ಬಗ್ಗೆ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಡಿ.ಎಸ್.ಗಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ಡಿ., ಸದಸ್ಯೆ ಪುಷ್ಪಾವತಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಸಜಿಪಮೂಡ, ಸಜಿಪಮುನ್ನೂರು ಗ್ರಾಪಂ ಅಧ್ಯಕ್ಷರು, ಸದಸ್ಯರು, ಸಜಿಪಮುನ್ನೂರು ಏತ ನೀರಾವರಿ ಯೋಜನೆಯ ಅಧ್ಯಕ್ಷ ಕೆ. ರಾಜಶೇಖರ ನಾಯಕ್, ಇಲಾಖೆಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಸುಧಾಕರ ಶೆಟ್ಟಿಯವರನ್ನು ಗೌರವಿಸಲಾಯಿತು. ಸಜಿಪಮೂಡ ಏತ ನೀರಾವರಿ ಯೋಜನಾ ಸಮಿತಿಯ ಗೌರವ ಅಧ್ಯಕ್ಷ ಎ.ಸಿ.ಭಂಡಾರಿ ಸ್ವಾಗತಿಸಿದರು. ಸಮಿತಿಯ ಸದಸ್ಯ ಸುಬ್ರಹ್ಮಣ್ಯ ಭಟ್ ಮಜಿನಡ್ಕ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು.





