ತಾಲೂಕು ಮಟ್ಟದಲ್ಲೂ ವೃತ್ತಿಶಿಕ್ಷಣ ವಸ್ತುಗಳ ಪ್ರದರ್ಶನಗಳಾಗಲಿ: ದ.ಕ. ಜಿಪಂ ಸಿಇಒ ಪಿ.ಐ. ಶ್ರೀವಿದ್ಯಾ

ಮಂಗಳೂರು, ಜ.6: ಮಕ್ಕಳ ಸೃಜನಾತ್ಮಕ ಕಲೆಗಳು ಹೊರಹೊಮ್ಮಲು ಅನುಕೂಲವಾಗುವಂತಹ ವೃತ್ತಿ ಶಿಕ್ಷಣ ವಸ್ತುಗಳ ಪ್ರದರ್ಶನಗಳನ್ನು ಕೇವಲ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸದೆ ತಾಲೂಕು ಮಟ್ಟದಲ್ಲೂ ಆಯೋಜಿಸಿದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭಾ ಕಲಾತ್ಮಕತೆ ಬೆಳಗಲು ಅನುಕೂಲವಾಗಲಿದೆ ಎಂದು ದ.ಕ. ಜಿಪಂ ಸಿಇಒ ಪಿ.ಐ. ಶ್ರೀವಿದ್ಯಾ ಅಭಿಪ್ರಾಯಿಸಿದ್ದಾರೆ.
ಅವರು ಇಂದು ನಗರದ ಬೊಕ್ಕಪಟ್ಣ ಸರಕಾರಿ ಪಪೂ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಾ ಅಭಿಯಾನ ಮತ್ತು ದ.ಕ.ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತುಗಳ ಪ್ರದರ್ಶನ ಉದ್ಘಾಟಿಸಿ ಮಾತ ನಾಡುತ್ತಿದ್ದರು.
ಪ್ರದರ್ಶನದ ವಸ್ತುಗಳು, ತೋಟಗಾರಿಕೆ ಗಿಡಗಳು, ಕಸದಿಂದ ಮಾಡಿರುವ ಆಭರಣಗಳು, ಹೂ ದಾನಿಗಳು, ವಿಜ್ಞಾನ ಮಾದರಿಗಳು ಎಲ್ಲವೂ ಸುಂದರ ಹಾಗೂ ಕೌತುಕಮಯವಾಗಿದೆ ಎಂದವರು ಮೆಚ್ಚುಗೆ ಸೂಚಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಯಟ್ ಪ್ರವಾಚಕ ಮೊಸೆಸ್ ಜಯಶೇಖರ್ ವಹಿಸಿದ್ದರು. ಡಯಟ್‌ನ ಪ್ರಾಂಶುಪಾಲ ಸಿಪ್ರಿಯನ್ ಮೊಂತೆರೊ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ, ಸದಾನಂದ ಪೂಂಜಾ, ಗೀತಾ ಮೋಹನ್ ಶೆಟ್ಟಿ ಭಾಗವಹಿಸಿದ್ದರು.
ವೃತ್ತಿಶಿಕ್ಷಣ ವಿಷಯ ಪರಿವೀಕ್ಷಕ ಎ.ಐ.ಖಾಜಿ ಮಾತನಾಡಿ, ಇದು 5ನೆ ವರ್ಷದ ವೃತ್ತಿ ಶಿಕ್ಷಣ ವಸ್ತುಗಳ ಪ್ರದರ್ಶನವಾಗಿದ್ದು, ಇಲ್ಲಿ 47 ಶಾಲೆಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ವಸ್ತುಗಳೊಂದಿಗೆ ಭಾಗವಹಿಸಿದ್ದಾರೆ ಎಂದು ತಿಳಿಸಿದರು. ಶಿಕ್ಷಕಿ ಸಫಲಾ ಪ್ರದರ್ಶನದ ಕುರಿತು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರದರ್ಶನ ಜ.6 ಮತ್ತು 7ರಂದು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.







