ಪಲ್ಸ್ ಪೋಲಿಯೊ: ಉಡುಪಿ ಜಿಲ್ಲೆಯಲ್ಲಿ 644 ಲಸಿಕಾ ಕೇಂದ್ರಗಳು

ಉಡುಪಿ, ಜ.6: ಜಿಲ್ಲೆಯಲ್ಲಿ ಜ.17ರಂದು ನಡೆಯುವ ಪಲ್ಸ್ ಪೋಲಿಯೊ ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಇಲಾಖೆಗಳು ಹಾಗೂ ಸಂಘಸಂಸ್ಥೆಗಳು ಸಂಪೂರ್ಣ ಸಹಕಾರ ನೀಡುವಂತೆ ಉಡುಪಿ ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಇತ್ತೀಚೆಗೆ ಮಣಿಪಾಲದಲ್ಲಿರುವ ಜಿಪಂ ಸಭಾಂ ಗಣದಲ್ಲಿ ನಡೆದ ಪಲ್ಸ್ ಪೋಲಿಯೊ ಜಿಲ್ಲಾ ಲಸಿಕಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಈ ವರ್ಷ ಮೊದಲ ಸುತ್ತಿನಲ್ಲಿ ಜಿಲ್ಲೆಯಲ್ಲಿರುವ 0-5 ವರ್ಷದೊಳಗಿನ 87,776 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಗುರಿ ಹೊಂದಿದ್ದು, ಇದಕ್ಕಾಗಿ 644 ಲಸಿಕಾ ಕೇಂದ್ರಗಳನ್ನು ಹಾಗೂ ಮೊಬೈಲ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು. ಜಿಲ್ಲೆಯ ಎಲ್ಲ 158 ಗ್ರಾಪಂಗಳ ಸದಸ್ಯರು ಮತ್ತು ಪಿಡಿಒಗಳು ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಸೂಚಿಸಿದ ಸಿಇಒ, ನಗರಸಭಾ ಹಾಗೂ ಪುರಸಭೆಗಳ ವ್ಯಾಪ್ತಿಯ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ಕೊಳಚೆ ಪ್ರದೇಶದ ನಿವಾಸಿಗಳಿಗೆ ಈ ಕಾರ್ಯಕ್ರಮದ ಕುರಿತು ಅರಿವು ಮೂಡಿಸಿ, ಲಸಿಕಾ ಕೇಂದ್ರಗಳಿಗೆ ಬರುವಂತೆ ಪ್ರಚಾರ ಮಾಡಲು ಪೌರಾಯುಕ್ತರಿಗೆ ಸೂಚಿಸಿದರು.
ಶಾಲಾ ಮಕ್ಕಳ ಮೂಲಕ ಅವರ ಮನೆಯಲ್ಲಿ ಮತ್ತು ಸಮೀಪದ ಮನೆಗಳ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸುವ ಕುರಿತಂತೆ ಪ್ರಚಾರ ಮಾಡಬೇಕು. ಶಾಲಾ ಕೊಠಡಿಗಳಲ್ಲಿ ಲಸಿಕಾ ಕೇಂದ್ರಗಳಿದ್ದಲ್ಲಿ ಕಟ್ಟಡದ ಕೀಲಿ ಕೈ ನೀಡುವಂತೆ ವಿದ್ಯಾಂಗ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.
ಪಲ್ಸ್ ಪೋಲಿಯೊ ಲಸಿಕೆ ಸಂಗ್ರಹ ಮತ್ತು ಮಂಜಿನ ಒತ್ತೆ ತಯಾರಿಸಲು ಅನುಕೂಲವಾಗುವಂತೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಮೆಸ್ಕಾಂ ಇಲಾಖೆಗೆ ಹಾಗೂ ಲಸಿಕಾ ಕಾರ್ಯಕ್ರಮಕ್ಕೆ ಹೆಚ್ಚಿನ ವಾಹನಗಳ ಅಗತ್ಯವಿದ್ದಲ್ಲಿ ಸಕಾಲದಲ್ಲಿ ಒದಗಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.
ರೋಟರಿ, ಲಯನ್ಸ್ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ತಿಳಿಸಿದ ಪ್ರಿಯಾಂಕಾ, ಕಾರ್ಯಕ್ರಮದ ಉದ್ಘಾಟನೆ ಉಡುಪಿ ಮುದ್ದಣ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಮತ್ತು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.







