ಬಡ್ಡಿದಂಧೆ ಮಾಫಿಯಾ ಕಡಿವಾಣಕ್ಕೆ ಶಾಸಕ ಸೂಚನೆ
ಬೆಳ್ತಂಗಡಿ, ಜ.6: ತಾಲೂಕಿನಲ್ಲಿ ಬಡ್ಡಿ ದಂಧೆ ಮಾಫಿಯಾ ಜೋರಾಗಿ ನಡೆ ಯುತ್ತಿದೆ. ಬಡವರು ಸುಲಭವಾಗಿ ಹಣ ಸಿಗುತ್ತದೆ ಎಂದು ನಂಬಿ ಬಡ್ಡಿಗೆ ದುಡ್ಡನ್ನು ಪಡೆದು ಬೀದಿ ಪಾಲಾಗುತ್ತಿದ್ದಾರೆ. ಈ ರೀತಿಯ ಬಡ್ಡಿಹಣವನ್ನು ನೀಡಲು ಇವರಿಗೆ ಪರವಾನಿಗೆ ಇದೆಯೋ? ಇದೆ ಎಂದಾದರೆ ಯಾರು ನೀಡಿದ್ದು ಎಂದು ತಿಳಿಸಬೇಕು. ಇಲ್ಲವಾದಲ್ಲಿ ಬಡವರ ರಕ್ತ ಹೀರುವ ಇಂತಹ ದಂಧೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಬುಧವಾರ ನಡೆದ ಬೆಳ್ತಂಗಡಿ ತಾಪಂನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕೇಳಿ ಬಂತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ವಸಂತ ಬಂಗೇರ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾ ಖೆಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸದಸ್ಯ ಶೈಲೇಶ್ ಕುಮಾರ್ ಬಡ್ಡಿದಂಧೆಯ ಬಗ್ಗೆ ಗಮನ ಸೆಳೆದರು. ಇದಕ್ಕೆ ಸದಸ್ಯರೂ ಧ್ವನಿಗೂಡಿಸಿದರು.
ತಾಲೂಕಿನಲ್ಲಿ ಎಂಡೋಪೀಡಿತ ಕುಟುಂಬಗಳಿಗೆ ನೀಡುವ ಸೌಲಭ್ಯವು ಇತರ ಕುಟುಂಬಗಳ ಪಾಲಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಎಂಡೋ ಪೀಡಿತ ಕುಟುಂಬಕ್ಕೆ ಮಾಡುವ ಅನ್ಯಾಯ ಇದಾಗಿದೆ. ಹಾಗಾಗಿ ಆರೋಗ್ಯ ಇಲಾಖೆ 15 ದಿನದೊಳಗೆ ಎಂಡೋ ಪೀಡಿತರ ಪುನರ್ ಸರ್ವೇ ಮಾಡಬೇಕು ಎಂದು ಶಾಸಕ ಕೆ. ವಸಂತ ಬಂಗೇರ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಚಾರ್ಮಾಡಿ ಕೊಂಬಿನಡ್ಕ ಶಾಲೆಗೆ ದಾನವಾಗಿ ನೀಡಿದ ಜಾಗದ ದಾಖಲಾತಿ ಇನ್ನೂ ಆಗಿಲ್ಲ. ಕಳೆದ ಸಭೆಯಲ್ಲಿ ಉಪನೋಂದಣಿೆ ಕಚೇರಿ ಅಧಿಕಾರಿಗಳು ನೋಂದಣಿ ಮಾಡಿಕೊಡುತ್ತೇನೆ ಎಂದು ಹೇಳಿದ್ದರೂ ಈವರೆಗೆ ಆಗಿಲ್ಲ. ಇದೀಗ ಶಿಕ್ಷಣ ಇಲಾಖೆ ಉಚಿತವಾಗಿ ಮಾಡಿಕೊಡಬೇಕು ಎಂದು ಪತ್ರ ಬರೆ ಯಲಾಗಿದೆ ಎಂದು ಹೇಳುತ್ತಿದ್ದಾರೆ. ಜಾಗ ದಾನ ನೀಡಿದರೂ ಸರಕಾರಿ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯವಹಿಸುವುದು ಸರಿಯಲ್ಲವೆಂದು ಜಿಪಂ ಸದಸ್ಯ ಕೊರಗಪ್ಪನಾಯ್ಕೆ ಆರೋಪಿಸಿದರು. ಇದಕ್ಕುತ್ತರಿಸಿದ ಶಿಕ್ಷಣ ಇಲಾಖಾಧಿ ಕಾರಿ, ಕಂದಾಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯಲ್ಲಿ ಈ ವೆಚ್ಚ ಭರಿ ಸಲು ಅವಕಾಶವಿಲ್ಲ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಶಿಕ್ಷಣ ಸಚಿವಾಲಯಕ್ಕೆ ಕಳುಹಿಸಿ ಅಲ್ಲಿಂದ ಅನುಮೋದನೆ ಬಂದರೆ ಮಾತ್ರ ದಾಖಲಾತಿಯಾಗಬಹುದು ಎಂದು ಉತ್ತರಿಸಿದರು.
94ಸಿಯ ಅರ್ಜಿಗಳು ವಿಲೇವಾರಿ ಆಗದಿರುವ ಬಗ್ಗೆ ಜಿಪಂ ಸದಸ್ಯ ಶೈಲೇಶ್ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು. ಮೆಸ್ಕಾಂನ ವಿದ್ಯುತ್ ಕಂಬಗಳಲ್ಲಿ ಪಕ್ಷ-ಧರ್ಮಗಳ ಪರ-ವಿರೋಧ ಬರಹಗಳು ಕಂಡುಬರುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ನಾಮ ನಿರ್ದೇಶಿತ ಸದಸ್ಯ ಪಿ.ಕೆ. ಚಂದ್ರಶೇಖರ್ ಒತ್ತಾಯಿಸಿದರು. ತಾಪಂ ಅಧ್ಯಕ್ಷೆ ಜಯಂತಿ ಪಾಲೇದು, ಉಪಾಧ್ಯಕ್ಷ ವಿಷ್ಣುಮರಾಠೆ, ಜಿಪಂ ಆರೋಗ್ಯ ಶಿಕ್ಷಣ ಸಮಿತಿಯ ಅಧ್ಯಕ್ಷೆ ಸಿ.ಕೆ. ಚಂದ್ರಕಲಾ, ತಹಶೀಲ್ದಾರ್ ಪ್ರಸನ್ನಮೂರ್ತಿ, ತಾಪಂ ಇಒ ಸೂರ್ಯ ನಾರಾಯಣ ಭಟ್ ಉಪಸ್ಥಿತರಿದ್ದರು.







