ಬೃಹತ್ ಭೂಕಂಪ ಭೀತಿ: ಎಂಎಚ್‌ಎ ಎಚ್ಚರಿಕೆ
ನವದೆಹಲಿ: ದೇಶಕ್ಕೆ ಮತ್ತೊಂದು ದೊಡ್ಡ ಅಪಾಯದ ಮುನ್ಸೂಚನೆಯನ್ನು ಕೇಂದ್ರ ಸರ್ಕಾರದ ವಿಕೋಪ ನಿರ್ವಹಣೆ ತಜ್ಞರು ನೀಡಿದ್ದಾರೆ. ಈಗಾಗಲೇ ಪ್ರಕ್ಷುಬ್ಧವಾಗಿರುವ ಹಿಮಾಲಯನ್ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 8.2ರಷ್ಟು ತೀವ್ರವಾಗಿರುವ ಭೂಕಂಪ ಸಂಭವಿಸುವ ಎಚ್ಚರಿಕೆ ನೀಡಿದ್ದಾರೆ.
ಮಣಿಪುರದಲ್ಲಿ ಸೋಮವಾರ ಸಂಭವಿಸಿದ ಭೂಕಂಪಕ್ಕಿಂತಲೂ ಇದು ತೀವ್ರವಾಗಿರಲಿದೆ. ಇಂಥ ವಿಕೋಪ ಭವಿಷ್ಯದಲ್ಲಿ ಈ ಪ್ರದೇಶದಲ್ಲಿ ಸಂಭವಿಸಿವೆ. ಭೂಪದರದ ಚಲನೆಯಿಂದ ಇಂಥ ಸರಣಿ ಕಂಪನಗಳು ಸಂಭವಿಸಲಿದ್ದು, 2016 ಜನವರಿಯಲ್ಲಿ ಮಣಿಪುರದಲ್ಲಿ (6.7 ತೀವ್ರತೆ), ನೇಪಾಳದಲ್ಲಿ 2015ರ ಮೇ ತಿಂಗಳಲ್ಲಿ, ಸಿಕ್ಕಿಂನಲ್ಲಿ 2011ರಲ್ಲಿ ಸಂಭವಿಸಿದ ಕಂಪನಗಳ ವೇಳೆ ಈ ಪದರಗಳಲ್ಲಿ ಬಿರುಕುಗಳು ಉಂಟಾಗಿವೆ. ಇದು ರಿಕ್ಟರ್ ಮಾಪಕದಲ್ಲಿ 8.0ಗಿಂತಲೂ ಅಧಿಕ ತೀವ್ರತೆಯ ಕಂಪನಗಳಿಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಿದ್ದಾರೆ.
ನೇಪಾಳ ದುರಂತದ ಬಳಿಕ ರಾಷ್ಟ್ರೀಯ ವಿಕೋಪ ನಿರ್ವಹಣೆ ಸಂಸ್ಥೆ ಎಚ್ಚರಿಕೆ ನೀಡಿ, ಈ ಪ್ರದೇಶದ ಸುತ್ತಮುತ್ತ ಮತ್ತಷ್ಟು ಕಂಪನಗಳ ಅಪಾಯವಿದೆ. ಇಡೀ ಉತ್ತರ ಭಾರತ ಹಾಗೂ ಪರ್ವತಶ್ರೇಣಿಗಳ ಮೇಲೆ ಈ ಅಪಾಯದ ಕತ್ತಿ ತೂಗುತ್ತಿದೆ ಎಂದು ಎಚ್ಚರಿಸಿತ್ತು. ಇತ್ತೀಚೆಗೆ ಅರುಣಾಚಲಪ್ರದೇಶದ ರಾಜಧಾನಿ ಇಟಾನಗರದಲ್ಲಿ ನಡೆದ 11 ಬೆಟ್ಟ ರಾಜ್ಯಗಳ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬಂದಿತ್ತು.
ನೇಪಾಳ, ಭೂತಾನ್, ಮ್ಯಾನ್ಮಾರ್ ಹಾಗೂ ಭಾರತವನ್ನು ಸಂಪರ್ಕಿಸಿರುವ ಭೂಪದರಕ್ಕೆ ದೊಡ್ಡ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಿಹಾರ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಬೆಟ್ಟ ರಾಜ್ಯಗಳಲ್ಲಿ ದೊಡ್ಡ ಭೂಕಂಪದ ಸಾಧ್ಯತೆ ಇದೆ ಎಂದು ಎನ್‌ಐಡಿಎಂ ನಿರ್ದೇಶಕ ಸಂತೋಷ್ ಕುಮಾರ್ ಅವರು ವಿವರಿಸಿದ್ದಾರೆ.







