ನಾವು ದಲಿತರಾಗಿದ್ದಕದಕ್ಕೇ ನಮ್ಮ ವಿರುದ್ಧ ಕಾನೂನು ಕ್ರಮ
ಮಧ್ಯಪ್ರದೇಶದ ಇಬ್ಬರು ದಲಿತ ಐಎಎಸ್ ಅಧಿಕಾರಿಗಳ ಆರೋಪ
ಭೋಪಾಲ,ಜ.5: ರಾಜ್ಯದ ಬಿಜೆಪಿ ಸರಕಾರವು ತಾರತಮ್ಯವೆಸಗುತ್ತಿದೆ ಎಂದು ಆರೋಪಿಸಿರುವ ಇಬ್ಬರು ದಲಿತ ಐಎಎಸ್ ಅಧಿಕಾರಿಗಳಾದ ರಮೇಶ ಥೆಟೆ ಮತ್ತು ಶಶಿ ಕರ್ಣಾವತ್ ಅವರು, ಸರಕಾರವು ತಮ್ಮ ವಿರುದ್ಧ ಕಾನೂನು ಕ್ರಮಕ್ಕೆ ಸದಾ ಸಿದ್ಧವಿದೆ. ಆದರೆ ಮೇಲ್ಜಾತಿಗಳ ಅಧಿಕಾರಿಗಳು ನಡೆಸಿರುವ ಇಂತಹುದೇ ಅವ್ಯವಹಾರಗಳನ್ನು ಕಡೆಗಣಿಸಿದೆ ಎಂದು ಹೇಳಿದ್ದಾರೆ.
ಬಿಜೆಪಿಯದ್ದೇ ಆಡಳಿತವಿರುವ ರಾಜಸ್ಥಾನದಲ್ಲಿ ತನ್ನ ವಿರುದ್ಧ ತಾರತಮ್ಯವೆಸಗಲಾಗುತ್ತಿದೆ ಎಂದು ಆರೋಪಿಸಿ ಐಎಎಸ್ ಅಧಿಕಾರಿಯೋರ್ವರು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಒಂದು ವಾರದ ಬಳಿಕ ಮಧ್ಯಪ್ರದೇಶದಲ್ಲಿನ ಈ ತಾರತಮ್ಯ ಪ್ರಕರಣ ಬೆಳಕಿಗೆ ಬಂದಿದೆ.
1993ರ ತಂಡದ ಅಧಿಕಾರಿಯಾಗಿರುವ ಥೆಟೆ ವಿರುದ್ಧ ಅಕ್ರಮ ಭೂ ವಿಲೇವಾರಿ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಬಾಕಿಯಿರುವ ದೂರುಗಳಲ್ಲಿ ಕಾನೂನು ಕ್ರಮ ಜರಗಿಸಲು ಮ.ಪ್ರ.ಸರಕಾರವು ಇತ್ತೀಚಿಗೆ ಅನುಮತಿ ನೀಡಿತ್ತು. ಎರಡು ವರ್ಷಗಳ ಹಿಂದೆ ಥೆಟೆ ಉಜ್ಜೈನ್‌ನಲ್ಲಿ ಅಪರ ವಿಭಾಗಾಧಿಕಾರಿಯಾಗಿದ್ದಾಗ ಅವರ ವಿರುದ್ಧ ಈ ದೂರುಗಳು ದಾಖಲಾಗಿದ್ದವು.
ತನ್ನ ವಿರುದ್ಧದ ದೂರುಗಳು ಮೇಲ್ಜಾತಿಗಳ ಕುತಂತ್ರವೆಂದು ಥೆಟೆ ಬಣ್ಣಿಸಿದ್ದಾರೆ. ಪ್ರಕರಣದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಉಚ್ಚ ನ್ಯಾಯಾಲಯವು ಆದೇಶ ನೀಡಿರುವುದರಿಂದ ತನ್ನ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವುದು ಅಕ್ರಮವಾಗಿದೆ ಎಂದು ವಾದಿಸಿ ಅವರು ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರಗಳನ್ನೂ ಬರೆದಿದ್ದಾರೆ.
ದಲಿತ ಆದಿವಾಸಿ ವೇದಿಕೆಯು ಬುಡಕಟ್ಟು ಜನರು ಮತ್ತು ಅಧಿಕಾರಿಗಳು ಸೇರಿದಂತೆ ಪರಿಶಿಷ್ಟ ಜಾತಿಗಳಿಗೆ ತಾರತಮ್ಯದ ವಿರುದ್ಧ ಜ.11ರಂದು ಭೋಪಾಲದಲ್ಲಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಥೆಟೆ ಭಾಗವಹಿಸಲಿದ್ದಾರೆ.
1999ರಲ್ಲಿ ಐಎಎಸ್‌ಗೆ ಭಡ್ತಿ ಪಡೆದಿದ್ದ ಕರ್ಣಾವತ್ ಕೂಡ ರಾಜ್ಯ ಸರಕಾರದ ವಿರುದ್ಧ ಇಂತಹುದೇ ಆರೋಪವನ್ನು ಮಾಡಿದ್ದಾರೆ. 2013ರಲ್ಲಿ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಕರ್ಣಾವತ್‌ಗೆ ಐದು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದ ನಂತರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.







