ನಾಲ್ವರು ಭಯೋತ್ಪಾದಕರ ಶವಗಳು ಇನ್ನೂ ಕಾಡಲ್ಲೇ ಬಾಕಿ ಪಠಾಣ್‌ಕೋಟ್ ಭಯೋತ್ಪಾದಕ ದಾಳಿ

ನಾಲ್ವರು ಭಯೋತ್ಪಾದಕರ ಶವಗಳು ಇನ್ನೂ ಕಾಡಲ್ಲೇ ಬಾಕಿ
ಪಠಾಣ್‌ಕೋಟ್ ಭಯೋತ್ಪಾದಕ ದಾಳಿ
ಪಠಾಣ್‌ಕೋಟಾ, ಜ.6: ಪಠಾಣ್‌ಕೋಟ್‌ನವಾಯುಪಡೆಯ ನೆಲೆಗೆ ಭಯೋತ್ಪಾದಕ ದಾಳಿ ನಡೆದ 5 ದಿನಗಳು ಕಳೆದಿವೆ. ಆದಾಗ್ಯೂ, ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರ ಶವಗಳನ್ನು ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್(ಡಿಎಸ್‌ಪಿ) ಲೈನ್‌ನ ಹಿಂದಿನ ಸುತ್ತಿವರಿಯಲಾಗಿರುವ ಪ್ರದೇಶದಿಂದ ಬುಧವಾರ ಇನ್ನಷ್ಟೇ ತೆರವುಗೊಳಿಸಬೇಕಿದೆ.
ಭಾರತೀಯ ವಾಯು ಪಡೆಯ ನೆಲೆಯನ್ನು ಶೋಧ ಹಾಗೂ ಸ್ವಚ್ಛತಾ ಕಾರ್ಯ ಈಗಲೂ ಮುಂದಿವರಿದಿದೆ. ಇಂದು, 20 ಮಂದಿ ಪತ್ರಕರ್ತರನ್ನು ಶಾಲಾ ವಾಹನವೊಂದರಲ್ಲಿ 40 ನಿಮಿಷಗಳ ಪ್ರವಾಸಕ್ಕಾಗಿ ಎನ್‌ಕೌಂಟರ್ ನಡೆದಿದ್ದ ಸ್ಥಳಕ್ಕೆ ಕೊಂಡೊಯ್ಯಲಾಗಿತ್ತು.
ಭದ್ರತಾ ಕಾರಣಗಳಿಗಾಗಿ ವರದಿಗಾರರಿಗೆ ಕ್ಯಾಮರಾ ಹಾಗೂ ಮೊಬೈಲ್‌ಗಳನ್ನು ಒಯ್ಯಲು ಅವಕಾಶ ನೀಡಿರಲಿಲ್ಲ. ನೂರಾರು ಕಮಾಂಡೊಗಳು ವಾಯು ನೆಲೆಯ ಮೇಲೆ ನಿಕಟ ನಿಗಾ ಇರಿಸಿದ್ದರು. ರಾಷ್ಟ್ರೀಯ ಭದ್ರತಾ ಗಾರ್ಡ್,ಭೂ ಸೇನೆ ಹಾಗೂ ವಾಯುದಳದ ಯೋಧರು ಪ್ರದೇಶವನ್ನು ಸ್ಫೋಟಕ ಮುಕ್ತಗೊಳಿಸುವ ಕಾರ್ಯವನ್ನು ನಡೆಸುತ್ತಿದ್ದರು.
ವಾಯು ನೆಲೆಯ ಪ್ರವೇಶ ದ್ವಾರದ ಬಳಿಯ ಬಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಕಮಾಂಡೊಗಳು ಸೇರಿ, ಪ್ರತಿ ದಾಳಿ ನಡೆಸಿದ್ದರು.
ಅಲ್ಲಿಂದ ಸುಮಾರು 1ಕಿ.ಮೀ. ದೂರದಲ್ಲಿ ಸುಟ್ಟಿದ್ದ ಟ್ರಕ್ಕೊಂದು ಮಿಲಟರಿ ಎಂಜಿನಿಯರಿಂಗ್ ಸರ್ವಿಸ್‌ನ ಯಾಂತ್ರಿಕ ಸಾರಿಗೆ ದುರಸ್ತಿ(ಎಂಟಿಆರ್) ಘಟಕದಲ್ಲಿ ಗುರು ಸೇವಕ್ ಸಿಂಗ್ ಸಹಿತ ವಾಯು ದಳದ ಗರುಡ ಕಮಾಂಡೊ ಪಡೆ ಹಾಗೂ ಭಯೋತ್ಪಾದಕರ ಮೊದಲ ಮುಖಾಮುಖಿಗೆ ಸಾಕ್ಷಿಯಾಗಿ ನಿಂತಿತ್ತು. ಸಿಂಗ್, ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.
ಬಾಂಬ್ ನಿಷ್ಕ್ರಿಯ ದಳವೊಂದು ಪ್ರದೇಶವನ್ನು ಸ್ವಚ್ಛಗೊಳಿಸುತ್ತಿತ್ತು. ವಾಯು ಪಡೆಯ ಇತರ ಟ್ರಕ್‌ಗಳು ಹತ್ತಿರದಲ್ಲೇ ನಿಂತಿದ್ದವು.
ಡಿಎಸ್‌ಸಿ ವಸತಿಗಳ ಸಾಲು ಕೇವಲ 120ಮೀ. ದೂರದಲ್ಲಿತ್ತು. ಸೇನಾ ಉಡುಗೆಯಲಿದ್ದ ನಾಲ್ವರು ಭಯೋತ್ಪಾದಕರ ಶವಗಳು ಬಿಳಿ ರಿಬ್ಬನ್‌ಗಳಿಂದ ಸುತ್ತುವರಿದಿದ್ದ ಡಿಎಸ್‌ಸಿ ಲೈನ್‌ಗಳ ಹಿಂದಿನ ಕಾಡಿನಲ್ಲಿ ಬಿದ್ದಿದ್ದವು.
ಹತ್ತಿರದಲ್ಲೇ ಒಂದು ವಿಧಿ ವಿಜ್ಞಾನಿಗಳ ತಂಡ ಹಾಗೂ ರಾಷ್ಟ್ರೀಯ ತನಿಖೆ ಸಂಸ್ಥೆಯ ಸದಸ್ಯರು ಕೆಲಸ ಮಾಡುತ್ತಿದ್ದರು. ಬಲಗಡೆ ಸುಮಾರು 120ಮೀ. ದೂರದಲ್ಲಿ ಎರಡು ಮಹಡಿಗಳ ವಸತಿ ಕಟ್ಟಡವಿತ್ತು. ಅದರೊಳಗೆ ದಾಳಿ ನಡೆಸಿದ್ದ ಇಬ್ಬರು ಭಯೋತ್ಪಾದಕರು ಅಡಗಿದ್ದ ಕಾರಣ ಸೋಮವಾರ ಕಟ್ಟಡವನ್ನು ಸ್ಫೋಟಿಸಲಾಗಿತ್ತು.
ಗುಂಡುಗಳು ಹಾಗೂ ಮೋರ್ಟರ್ ಶೆಲ್‌ಗಳಿಂದ ಕರ್ರಗಾಗಿದ್ದ ಹಾಗೂ ಛಾವಣಿ ಒಳಗೆ ಕುಸಿದಿದ್ದ ಕಟ್ಟಡವು ಸಶಸ್ತ್ರ ಬಲ ಹಾಗೂ ಭಯೋತ್ಪಾದಕರ ನಡುವಣ ಭೀಕರ ಸಮರಕ್ಕೆ ಸಾಕ್ಷಿಯಾಗಿತ್ತು.
ಸೋಮವಾರ ಸಂಜೆ ಅಂತಿಮ ಕಾರ್ಯಾಚರಣೆ ನಡೆದ ಕಟ್ಟಡಕ್ಕೆ ಬರುವ ರಸ್ತೆಯಲ್ಲಿ ಟ್ಯಾಂಕ್‌ಗಳ ಚಕ್ರಗಳ ಗುರುತು ಕಾಣಿಸುತ್ತಿತ್ತು. ಕಟ್ಟಡದ ಹಿಂದಿನ ವಾಯು ನೆಲೆಯ ಆವರಣ ಗೋಡೆಯಿಂದ ಸೈನಿಕರು ನಿಕಟ ನಿಗಾ ಇರಿಸಿದ್ದರೆ, ಮೇಲ್ಗಡೆ ಹೆಲಿಕಾಪ್ಟರೊಂದು ಸುತ್ತು ಹೊಡೆಯುತ್ತಿತ್ತು.





