ಚುಟುಕು ಸುದ್ದಿಗಳು: ಲೈಬೀರಿಯದ ಭಾರತೀಯ ಶಾಂತಿಪಾಲಕರಿಗೆ ವಿಶ್ವಸಂಸ್ಥೆ ಪದಕ
ವಿಶ್ವಸಂಸ್ಥೆ, ಜ. 6: ಪಶ್ಚಿಮ ಆಫ್ರಿಕದ ದೇಶ ಲೈಬೀರಿಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಲು ನೀಡಿದ ದೇಣಿಗೆ ಮತ್ತು ತೋರಿದ ಶೌರ್ಯಕ್ಕಾಗಿ ಆ ದೇಶದಲ್ಲಿ ಕಾರ್ಯನಿರ್ವಹಿಸಿದ ಭಾರತೀಯ ಶಾಂತಿಪಾಲನಾ ಸೈನಿಕರನ್ನು ವಿಶ್ವಸಂಸ್ಥೆ ಗೌರವಿಸಿದೆ. ಭಾರತೀಯ ಶಾಂತಿಪಾಲನಾ ಪಡೆಯು ಮಹಿಳಾ ಘಟಕವೊಂದನ್ನೂ ಹೊಂದಿದೆ.
ಮಾಂಟ್‌ಸೆರಾಡೊ ಕೌಂಟಿಯ ಕಾಂಗೊ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಪಥಸಂಚಲನದಲ್ಲಿ 125 ಸದಸ್ಯ ಬಲದ ಭಾರತೀಯ ಶಾಂತಿಪಾಲನಾ ಪಡೆಯ ಸದಸ್ಯರು ಮತ್ತು ವಿಶ್ವಸಂಸ್ಥೆ ಪೊಲೀಸ್‌ನ 12 ಭಾರತೀಯ ಸಿಬ್ಬಂದಿಗೆ ಪದಕಗಳನ್ನು ಪ್ರದಾನ ಮಾಡಲಾಯಿತು.
ಭಾರತೀಯ ಶಾಂತಿಪಾಲನಾ ಪಡೆಯನ್ನು ಉದ್ದೇಶಿಸಿ ಮಾತನಾಡಿದ ಮಹಾ ಕಾರ್ಯದರ್ಶಿಯ ವಿಶೇಷ ಲೈಬೀರಿಯ ಪ್ರತಿನಿಧಿ ಫರೀದ್ ಝಾರಿಫ್, ಲೈಬೀರಿಯದ ಸಂಕಷ್ಟದ ಸಮಯದಲ್ಲಿ ಧೈರ್ಯದಿಂದ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸಿರುವುದಕ್ಕಾಗಿ ಭಾರತೀಯ ಯೋಧರಿಗೆ ಕೃತಜ್ಞತೆ ಸಲ್ಲಿಸಿದರು. ಸಂಕಷ್ಟದಲ್ಲಿದ್ದ ದೇಶವೊಂದರಲ್ಲಿ ಹಾಗೂ ಅಂತಾರಾಷ್ಟ್ರೀಯ ಸಮುದಾಯದಿಂದ ಬೆಂಬಲ ಮತ್ತು ನೆರವು ಬೇಕಿದ್ದ ಸಮಯದಲ್ಲಿ ಶಾಂತಿಪಾಲಕರು ಸೇವೆ ಸಲ್ಲಿಸಿದ್ದಾರೆ ಎಂದರು. ‘‘ಇದು ನಿಮ್ಮ ಮಾನವೀಯತೆಯ ಅತ್ಯುನ್ನತ ಪ್ರದರ್ಶನವಾಗಿದೆ’’ ಎಂದರು.ಭಾರತೀಯ ಶಾಂತಿಪಾಲನಾ ಘಟಕಕ್ಕೆ ಝಾರಿಫ್ ವಿದಾಯ ಕೋರಿದರು. ಅದು ಮುಂದಿನ ತಿಂಗಳು ಲೈಬೀರಿಯವನ್ನು ತೊರೆಯಲಿದೆ.