ಶೂಟಿಂಗ್ ಟೂರ್ನಿ: ವಿಶ್ವ ದಾಖಲೆ ಮುರಿದ ಅಪೂರ್ವಿ ಚಾಂಡೆಲಾ

ಹೊಸದಿಲ್ಲಿ, ಜ.6: ಸ್ವೀಡಿಶ್ ಕಪ್ ಗ್ರಾನ್‌ಪ್ರಿಯಲ್ಲಿ ಮಹಿಳೆಯರ 10 ಮೀ. ಏರ್‌ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಭಾರತದ ಶೂಟರ್ ಅಪೂರ್ವಿ ಚಾಂಡೆಲಾ ವಿಶ್ವ ದಾಖಲೆಯೊಂದನ್ನು ಮುರಿದಿದ್ದಾರೆ.
ಮಂಗಳವಾರ ನಡೆದ 10 ಮೀ. ಏರ್‌ರೈಫಲ್ ಸ್ಪರ್ಧೆಯಲ್ಲಿ 211.2 ಅಂಕ ಗಳಿಸಿದ ಅಪೂರ್ವಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ಚೀನಾದ ಯೀ ಸಿಲಿಂಗ್ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು(211) ಮುರಿದರು.
ಈಗಾಗಲೇ ರಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡಿರುವ ಅಪೂರ್ವಿ ಹೊಸ ವರ್ಷದಲ್ಲಿ ವಿಶ್ವ ದಾಖಲೆ ನಿರ್ಮಿಸುವುದರೊಂದಿಗೆ ಶುಭಾರಂಭ ಮಾಡಿದರು.
ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಗಳನ್ನು ಕ್ರಮವಾಗಿ ಸ್ವೀಡನ್‌ನ ಶೂಟರ್‌ಗಳಾದ ಅಸ್ಟ್ರಿಡ್ ಸ್ಟೆಫ್‌ಸೆನ್(207.6) ಹಾಗೂ ಸ್ಟೈನ್ ನೆಲ್ಸನ್‌ರ(185.0)ಪಾಲಾದವು.
‘‘ಸ್ವೀಡನ್‌ನಲ್ಲಿ ಜಯಿಸಿರುವ ಚಿನ್ನದ ಪದಕ ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ತನ್ನ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ರಾಜಸ್ಥಾನದ ತನ್ನ ಹಿತೈಷಿಗಳ ಬೆಂಬಲ, ಪ್ರೋತ್ಸಾಹ ಹಾಗೂ ಹಾರೈಕೆಯ ಫಲವಾಗಿ ವಿವಿಧ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ’’ ಎಂದು ಅಪೂರ್ವಿ ಚಾಂಡೇಲಾ ಪ್ರತಿಕ್ರಿಯಿಸಿದ್ದಾರೆ.
ರಾಜಸ್ಥಾನದ ಅಪೂರ್ವಿ ಕಳೆದ ತಿಂಗಳು ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಕಳೆದ ವರ್ಷಎಪ್ರಿಲ್‌ನಲ್ಲಿ ಕೊರಿಯಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಕಂಚಿನ ಪದಕವನ್ನು ಜಯಿಸುವುದರೊಂದಿಗೆ ಅಪೂರ್ವಿ ರಿಯೋ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿಕೊಂಡಿದ್ದರು.







