ಜಮ್ಮು -ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ವಿಧಿವಶ

ಹೊಸದಿಲ್ಲಿ, ಜ.7: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ (79) ಇಂದು ಹೊಸದಿಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಶ್ವಾಸಕೋಶ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರು ಡಿಸೆಂಬರ‍್ 24ರಂದು ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಪೀಪಲ್ ಡೆಮಾಕ್ರಿಕೆಟ್ ಪಾರ್ಟಿ(ಪಿಡಿಪಿ) ಅಧ್ಯಕ್ಷರಾಗಿದ್ದ ಮುಫ್ತಿ ಮುಹಮ್ಮದ್ ಸಯೀದ್ ಅವರು ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಾ.1, 2015ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಮುಫ್ತಿ ಪಿಡಿಪಿ ಅಧ್ಯಕ್ಷೆ ಮೆಹ್‌ಬೂಬಾ ಸೇರಿದಂತೆ ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮುಫ್ತಿ ಅವರು 1936, ಜನವರಿ 12ರಂದು ಜಮ್ಮು ಮತ್ತು ಕಾಶ್ಮೀರದ ಬಿಜ್‌ಬೆಹಾರದಲ್ಲಿ ಜನಿಸಿದ್ದರು. ದೀರ್ಘಕಾಲ ಕಾಲ ರಾಜಕೀಯ ಜೀವನ ನಡೆಸಿದ್ದ ಸಯೀದ್ 1987ರ ತನಕ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿದ್ದರು. ಬಳಿಕ ವಿ.ಪಿ. ಸಿಂಗ್ ಅವರ ಜನ್‌ಮೋರ್ಚಾ ಸೇರಿದರು. 1989ರಲ್ಲಿ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡರು. 1990ರ ತನಕ ಅದಿಕಾರದಲ್ಲಿದ್ದರು. ಅವರು ಗೃಹಸಚಿವರಾದ ಕೆಲವೇ ದಿನಗಳಲ್ಲಿ ಅವರ ಮೂರನೆ ಪುತ್ರಿ ರುಬಿಯಾಳನ್ನು ಭಯೋತ್ಪಾದಕರು ಅಪಹರಿಸಿದ್ದರು. ಪ್ರತಿಯಾಗಿ ಐದು ಉಗ್ರರನ್ನು ಬಿಡುಗಡೆಗೊಳಿಸಿದ ಬಳಿಕ ರುಬಿಯಾ ಬಿಡುಗಡೆಗೊಂಡಿದ್ದರು.
1991ರಲ್ಲಿ ಮತ್ತೆ ಕಾಂಗ್ರೆಸ್ ಸೇರಿದ ಮುಫ್ತಿ ಮುಹಮ್ಮದ್ ಸಯಿದ್ 1999ರ ತನಕ ಕಾಂಗ್ರೆಸ್‌ನಲ್ಲಿದ್ದರು. 1999ರಲ್ಲಿ ಪಿಡಿಪಿ ಸ್ಥಾಪಿಸಿದ್ದರು. 2002ರಲ್ಲಿ ನಡೆದ ಚುನಾವಣೆಯಲ್ಲಿ ಅವರ ಪಕ್ಷ 18 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದರು. ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
2015ರಲ್ಲಿ ಮುಫ್ತಿ ಮುಹಮ್ಮದ್ ಸಯೀದ್ ಎರಡನೆ ಬಾರಿ ಮುಖ್ಯಮಂತ್ರಿಯಾಗಿ ಒಂದು ವರ್ಷವನ್ನು ಪೂರ್ಣಗೊಳಿಸಿಲ್ಲ.ಈ ಮೊದಲು ಅವರು 2002, ನ.2ರಿಂದ 2005,ನ.2ರ ತನಕ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.







