ಭಾರತದ ಏಳು ಮಂದಿ ಪೈಕಿ ಒಬ್ಬರಿಗೆ ಮಲೇರಿಯಾ ಭೀತಿ
ಚೆನ್ನೈ: ಭಾರತದ ಏಳು ಮಂದಿ ಪೈಕಿ ಒಬ್ಬರು ಮಲೇರಿಯಾಗೆ ತುತ್ತಾಗುವ ಅಪಾಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ವಿಶ್ವದ ಒಟ್ಟು ಮಲೇರಿಯಾ ಪ್ರಕರಣಗಳ ಪೈಕಿ ಶೇ. 80ರಷ್ಟು ಪ್ರಕರಣಗಳು ಇಥಿಯೋಪಿಯಾ, ಪಾಕಿಸ್ತಾನ, ಇಂಡೋನೇಷ್ಯಾ ಹಾಗೂ ಭಾರತದಲ್ಲಿ ಇವೆ ಎಂದು ವರದಿ ತಿಳಿಸಿರುವುದು ಭಾರತದ ಆರೋಗ್ಯ ವಲಯದಲ್ಲಿ ಭೀತಿಗೆ ಕಾರಣವಾಗಿದೆ. ಇಷ್ಟಾಗಿಯೂ ಭಾರತದಲ್ಲಿ ಮಲೇರಿಯಾ ನಿರ್ಮೂಲನೆಗೆ ನೀಡುತ್ತಿರುವ ಅನುದಾನ ವಿಶ್ವದಲ್ಲೇ ಅತ್ಯಲ್ಪ.
ರಾಷ್ಟ್ರೀಯ ಸೊಳ್ಳೆಗಳಿಂದ ಹರಡುವ ರೋಗ ನಿಯಂತ್ರಣ ಯೋಜನೆ ಕಚೇರಿಯಿಂದ ಸಂಗ್ರಹಿಸಿದ ಅಂಕಿ ಅಂಶಗಳ ಆಧಾರದಲ್ಲಿ ವರದಿ ಸಿದ್ಧವಾಗಿದ್ದು, ದೇಶದಲ್ಲಿ 1.38 ದಶಲಕ್ಷ ಮಂದಿಗೆ ಮಲೇರಿಯಾ ಇದೆ ಎಂದು ವೈದ್ಯರು ಸಂಶಯಿಸಿದ್ದರು. ಈ ಪೈಕಿ 1.102 ದಶಲಕ್ಷ ಪ್ರಕರಣಗಳು ಖಚಿತವಾಗಿವೆ.
2011ರಲ್ಲಿ 1.31 ದಶಲಕ್ಷ ಮಂದಿಗೆ ಮಲೇರಿಯಾ ತಗುಲಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆಯಾಗಿದ್ದರೂ, 2013 (0.88 ದಶಲಕ್ಷ) ಹಾಗೂ 2012 (1.06 ದಶಲಕ್ಷ)ಕ್ಕೆ ಹೋಲಿಸಿದರೆ ಇದು ಅಧಿಕ. ಮಲೇರಿಯಾ ಸಾವಿನ ಸಂಖ್ಯೆ ಕೂಡಾ 2012ರಲ್ಲಿ 519 ಇದ್ದುದು, 2014ರಲ್ಲಿ 562ಕ್ಕೆ ಹೆಚ್ಚಿದೆ.





