ನ್ಯಾಯಾಧೀಶರ ಹುದ್ದೆ ಖಾಲಿ: ಕೋಟಿ ತಲುಪಲಿದೆ ಬಾಕಿ ಪ್ರಕರಣ
ಹೊಸದಿಲ್ಲಿ: ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಶೇ. 43ರಷ್ಟು ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇದ್ದು, ಈ ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಒಂದು ಕೋಟಿ ತಲುಪುವ ನಿರೀಕ್ಷೆ ಇದೆ.
ಈಗಾಗಲೇ ದೇಶದ 24 ಹೈಕೋರ್ಟ್‌ಗಳಲ್ಲಿ 45 ಲಕ್ಷ ಪ್ರಕರಣಗಳು ಬಾಕಿ ಇವೆ. 1044 ನ್ಯಾಯಮೂರ್ತಿ ಹುದ್ದೆಗಳಿದ್ದರೂ ಇರುವ ನ್ಯಾಯಾಧೀಶರ ಸಂಖ್ಯೆ ಕೇವಲ 599.
ನ್ಯಾಯಾಂಗ ನೇಮಕಾತಿ ವಿಚಾರದಲ್ಲಿ ನ್ಯಾಯಾಂಗ ಹಾಗೂ ಶಾಸಕಾಂಗದ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ನೇಮಕಾತಿ ಪ್ರಕ್ರಿಯೆ ನಡೆಯದಿರುವುದು ಇದಕ್ಕೆ ಮುಖ್ಯ ಕಾರಣ. ಅಂತಿಮವಾಗಿ ಇದೀಗ ಸುಪ್ರೀಂಕೋರ್ಟ್, ನ್ಯಾಯಾಂಗ ನೇಮಕಾತಿ ಆಯೋಗವನ್ನು ಅನೂರ್ಜಿತಗೊಳಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಯೂ ಐದು ಖಾಲಿ ಇದ್ದು, ಕಳೆದ ವರ್ಷದ ಫೆಬ್ರವರಿ 27ರಂದು ನೇಮಕಗೊಂಡ ಅಮಿತವ್ ಠಾಕೂರ್ ಅವರೇ ಕೊನೆಯದಾಗಿ ನೇಮಕಗೊಂಡವರು. ದೇಶದಲ್ಲಿ ಎಲ್ಲ ಹಂತಗಳ ನ್ಯಾಯಾಲಯದಲ್ಲಿ ಒಟ್ಟು 3.25 ಕೋಟಿ ಪ್ರಕರಣಗಳು ಬಾಕಿ ಇವೆ. ಇದೇ ವಾತಾವರಣ ಮುಂದುವರಿದರೆ ಇದು ನಾಲ್ಕು ಕೋಟಿಯನ್ನೂ ಮೀರುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಆತಂಕ ವ್ಯಕ್ತಪಡಿಸುತ್ತಾರೆ.





