ಆಮೀರ್ ಖಾನ್ ಇನ್ನು ಇನ್‌ಕ್ರೆಡಿಬಲ್ ಇಂಡಿಯಾದ ಪ್ರಚಾರ ರಾಯಭಾರಿಯಲ್ಲ

ಹೊಸದಿಲ್ಲಿ, ಜ.6: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆಯೆಂಬ ಹೇಳಿಕೆ ನೀಡಿದ್ದಕ್ಕಾಗಿ, ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ಆಮೀರ್‌ಖಾನ್‌ರನ್ನು ಕೇಂದ್ರ ಸರಕಾರದ ‘ಇನ್‌ಕ್ರೆಡಿಬಲ್ ಇಂಡಿಯಾ’ ಅಭಿಯಾನದ ಪ್ರಚಾರ ರಾಯಭಾರಿ ಸ್ಥಾನದಿಂದ ಕೈಬಿಡಲಾಗಿದೆ. ಇನ್‌ಕ್ರೆಡಿಬಲ್ ಇಂಡಿಯಾ ಅಭಿಯಾನದ ಗುತ್ತಿಗೆದಾರ ಸಂಸ್ಥೆಯ ಜೊತೆ ತನ್ನ ಒಪ್ಪಂದ ಕೊನೆಗೊಂಡಿರುವುದೇ ಇದಕ್ಕೆ ಕಾರಣವೆಂದು ಕೇಂದ್ರ ಸರಕಾರ ಸಮಜಾಯಿಷಿ ನೀಡಿದೆ.
‘‘ಇನ್‌ಕ್ರೆಡಿಬಲ್ ಇಂಡಿಯಾದ ‘ಅತಿಥಿದೇವೋಭವ ’ಅಭಿಯಾನದ ಗುತ್ತಿಗೆಯನ್ನು ಮ್ಯಾಕ್‌ನಾನ್ ವರ್ಲ್ಡ್‌ವೈಡ್ ಸಂಸ್ಥೆಗೆ ವಹಿಸಲಾಗಿತ್ತು. ಏಜೆನ್ಸಿಯು ಪ್ರಚಾರ ರಾಯಭಾರಿಯಾಗಿ ಆಮೀರ್‌ರನ್ನು ಗೊತ್ತುಪಡಿಸಿತ್ತು. ಈಗ ಆ ಏಜೆನ್ಸಿಯ ಜೊತೆಗಿನ ಒಪ್ಪಂದವು ಮುಕ್ತಾಯಗೊಂಡಿದೆ. ಏಜೆನ್ಸಿಯ ಜೊತೆಗಿನ ಗುತ್ತಿಗೆ ಮುಗಿದಿರುವುದರಿಂದ, ತನ್ನಿಂತಾನೆ ಆಮೀರ್ ಜೊತೆಗಿನ ಒಪ್ಪಂದವೂ ಅಸ್ತಿತ್ವದಲ್ಲಿರುವುದಿಲ್ಲ’’ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಮನೀಶ್ ಶರ್ಮಾ ಬುಧವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಚಿವಾಲಯವು ಆಮೀರ್‌ರನ್ನು ಪ್ರಚಾರರಾಯಭಾರಿಯಾಗಿ ನೇಮಿಸಿರಲಿಲ್ಲವೆಂದು ಅವರು ಸ್ಪಷ್ಟೀಕರಣ ನೀಡಿದರು. ಪ್ರವಾಸೋದ್ಯಮ ಸಚಿವಾಲಯದ ಪ್ರಚಾರ ರಾಯಭಾರಿಯಾಗಿ ಆಮೀರ್ ಖಾನ್ ಮುಂದುವರಿಯಲಿದ್ದಾರೆಯೇ ಎಂಬ ಪ್ರಶ್ನೆಗೆ ಶರ್ಮಾ ಖಂಡಿತವಾಗಿಯೂ ಇಲ್ಲ ಎಂದು ಉತ್ತರಿಸಿದರು. ಇನ್‌ಕ್ರೆಡಿಬಲ್ ಇಂಡಿಯಾ ಅಭಿಯಾನದ ಭಾಗವಾಗಿ ‘‘ಅತಿಥಿ ದೇವೋಭವ’’ ಅಭಿಯಾನವನ್ನು, ಯುಪಿಎ ಆಡಳಿತದಲ್ಲಿ ಆರಂಭಿಸಲಾಗಿತ್ತು.
ಎರಡು ತಿಂಗಳ ಹಿಂದೆ, ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆಯೆಂದು ಆಮೀರ್‌ಖಾನ್ ನೀಡಿದ ಹೇಳಿಕೆಯನ್ನು ಕೇಂದ್ರದ ಹಲವು ಹಿರಿಯ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದರು.





