ಮೂಢನಂಬಿಕೆ ಹುಟ್ಟಿಸಿ ಹಣ ದೋಚುತ್ತಿದ್ದ 3 ಮಂದಿಯ ಬಂಧನ
ಎರಡು ತಲೆ ಹಾವು ಮನೆಯಲ್ಲಿದ್ದರೆ ಆರ್ಥಿಕ ಸಮೃದ್ಧಿ!
ಮಂಗಳೂರು, ಜ.7: ಮನೆಯಲ್ಲಿ ಎರಡು ತಲೆ ಹಾವುಗಳನ್ನು ಇರಿಸಿಕೊಳ್ಳುವುದರಿಂದ ಆರ್ಥಿಕ ಸಮೃದ್ಧಿಯನ್ನು ಪಡೆಯಬಹುದೆಂಬ ಮೂಢನಂಬಿಕೆಯ ಮೂಲಕ ಶ್ರೀಮಂತ ವ್ಯಕ್ತಿಗಳಿಂದ ಹಣ ದೋಚುತ್ತಿದ್ದ ಮೂರು ಮಂದಿಯನ್ನು ಪಣಂಬೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮಾತ್ರವಲ್ಲದೆ ಬಂಧಿತರಿಂದ ವಶಪಡಿಸಿಕೊಳ್ಳಲಾದ ಹಾವನ್ನು ಪಿಲಿಕುಳ ನಿಸರ್ಗಧಾಮದ ವನ್ಯಜೀವಿ ಘಟಕಕ್ಕೆ ಹಸ್ತಾಂತರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಚಂದ್ರಶೇಖರ್, ಪಣಂಬೂರಿನ ಕುದುರೆಮುಖ ಲೈಟ್ ಹೌಸ್ ಬಳಿ ಮೂರು ಮಂದಿ ಇನ್ನೋವಾ ಕಾರಿನಲ್ಲಿ ಎರಡು ತಲೆ ಹಾವಿನೊಂದಿಗೆ ಗ್ರಾಹಕರಿಗಾಗಿ ಹೊಂಚು ಹಾಕುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಪಣಂಬೂರು ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಪತ್ತೆಯಾಗಿದೆ.
ಬಂಧಿತರನ್ನು ಪುತ್ತೂರು ನೆಲ್ಯಾಡಿಯ ಅನ್ವರ್ (30), ಬೆಂಗಳೂರು ಕನಕಪುರದ ವೆಂಕಟೇಶ್ (27), ತಿರುವನಂತಪುರದ ಅಲಂಪುರಂನ ಗಜರಾಧರನ್ (64) ಎಂದು ಗುರುತಿಸಲಾಗಿದೆ. ಬಂಧಿತರಿಂದ ಹಾವಿನ ಜತೆ, ಇನ್ನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪಣಂಬೂರು ಪೊಲೀಸ್ ಠಾಣೆಯಲ್ಲಿಬಂಧಿತರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು.





