ಸೈಯದ್ ಮುಶ್ತಾಕ್ ಅಲಿ ಟ್ರೋಫಿ; ಇರ್ಫಾನ್ ಪಠಾಣ್, ಹರ್ಭಜನ್ ಶೈನ್

ಕೊಚ್ಚಿ, ಜ.7: ಪಂಜಾಬ್ ತಂಡದ ನಾಯಕ ಹರ್ಭಜನ್ ಸಿಂಗ್ ಮತ್ತು ಬರೋಡ ತಂಡದ ನಾಯಕ ಇರ್ಫಾನ್ ಪಠಾಣ್ ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಟೂರ್ನಮೆಂಟ್‌ನಲ್ಲಿ ತನ್ನ ಅಪೂರ್ವ ಫಾರ್ಮ್‌ನ್ನು ಮುಂದುವರಿಸಿದ್ದಾರೆ.
ಇಲ್ಲಿ ನಡೆದ ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಹರ್ಭಜನ್ ಸಿಂಗ್(2-17) ಕೈಚಲಕದ ನೆರವಿನಲ್ಲಿ ಪಂಜಾಬ್ ತಂಡ ತ್ರಿಪುರಾ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿತು.
ಇದರೊಂದಿಗೆ ಪಂಜಾಬ್ ತಂಡ ಕ್ವಾರ್ಟರ್ ಫೈನಲ್ ಅವಕಾಶವನ್ನು ಜೀವಂತವಾಗಿರಿಸಿದೆ. ಮೊದಲು ಬ್ಯಾಟ್ ಮಾಡಿದ ತ್ರಿಪುರಾ ತಂಡ 18 ಓವರ್‌ಗಳಳ್ಲಿ 96 ರನ್‌ಗೆ ಅಲೌಟಾಯಿತು. ಸಮರ್ಥ ಸಿಂಗ್ 23 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್.
ನಾಯಕ ಹರ್ಭಜನ್ ಸಿಂಗ್ 4 ಓವರ್‌ಗಳಲ್ಲಿ 17ಕ್ಕೆ 2 ವಿಕೆಟ್, ಲೆಗ್ ಸ್ಪಿನ್ನರ್ ಸರ್ಬಜಿತ್ ಲಡ್ಡಾ 30ಕ್ಕೆ 3 ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ಪಂಜಾಬ್ ತಂಡ 15.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.
ಮನನ್ ವೊರಾ 39ಎಸೆತಗಳಲ್ಲಿ 35 ರನ್, ಅಮೊಲ್ ಮಲ್ಹೊತ್ರಾ 29 ಎಸೆತಗಳಲ್ಲಿ 6 ಬೌಂಡರಿಗಳನ್ನು ಒಳಗೊಂಡ 40 ರನ್ ಸೇರಿಸಿದರು.
ವಡೊಧರದಲ್ಲಿ ನಡೆದ ಪಂದ್ಯದಲ್ಲಿ ಬರೋಡ ತಂಡ ನಾಯಕ ಇರ್ಫಾನ್ ಪಠಾಣ್‌ರ ಆಲ್‌ರೌಂಡರ್ ಪ್ರದರ್ಶನದ ನೆರವಿನಲ್ಲಿ ಮಧ್ಯಪ್ರದೇಶ ವಿರುದ್ಧ 53 ರನ್‌ಗಳ ಜಯ ಗಳಿಸಿತು. ಬರೋಡ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 181 ರನ್ ಗಳಿಸಿತ್ತು. ಹಾರ್ದಿಕ್ ಪಾಂಡ್ಯ48, ಮೃಣುಲ್ ದೇವಧರ್ 33 ರನ್ ಗಳಿಸಿದ್ದರು. ಇರ್ಫಾನ್ ಪಠಾಣ್ 12 ಎಸೆತಗಳಲ್ಲಿ 27 ರನ್ ಸೇರಿಸಿ ತಂಡದ ಸ್ಕೋರನ್ನು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 181ಕ್ಕೆ ಏರಿಸಿದ್ದರು. ಮಧ್ಯಪ್ರದೇಶ ತಂಡ 16.4 ಓವರ್‌ಗಳಲ್ಲಿ 128 ರನ್ ಗಳಿಸಲಷ್ಟೇ ಶಕ್ತವಾಯಿತು. ಹರ್‌ಪ್ರೀತ್ ಸಿಂಗ್ ಭಾಟಿಯಾ 52 ರನ್ ಗಳಿಸಿದರು. ಇರ್ಫಾನ್ ಪಠಾನ್ 34ಕ್ಕೆ 4 ವಿಕೆಟ್ ಉಡಾಯಿಸಿ ಮಧ್ಯಪ್ರದೇಶದ ವಿರುದ್ಧ ಗೆಲುವಿಗೆ ನೆರವಾದರು.
ಇಂದು ನಡೆದ ಇತರ ಪಂದ್ಯಗಳಲ್ಲಿ ಗುಜರಾತ್ ವಿರುದ್ಧ ತಮಿಳುನಾಡು ತಂಡ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಆಂಧ್ರ ಪ್ರದೇಶ ಅಸ್ಸಾಂ ವಿರುದ್ಧ 12 ರನ್‌ಗಳ ಜಯ ಗಳಿಸಿತು.ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ಜಾರ್ಖಂಡ್ 76 ರನ್‌ಗಳ ಜಯ ದಾಖಲಿಸಿತು.





