‘ಎನ್.ಆರ್.ಕಾಲನಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಶೀಘ್ರ ಆರಂಭ ’
ಬೆಂಗಳೂರು, ಜ.7: ಎನ್.ಆರ್.ಕಾಲನಿ ಬಸ್ ನಿಲ್ದಾಣದ ಸಮೀಪವಿರುವ ಹೆರಿಗೆ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಶೀಘ್ರ ಆರಂಭಿಸಲಾಗುವುದು ಎಂದು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ತಿಳಿಸಿದರು. ಬಿಬಿಎಂಪಿಯ ಬಸವನಗುಡಿ ವಾರ್ಡ್‌ನ ಎನ್.ಆರ್.ಕಾಲನಿಯಲ್ಲಿ ನಿರ್ಮಿಸಲಾಗಿರುವ ‘ಬೆಂಗಳೂರು ಒನ್’ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಸವನಗುಡಿ ವಾರ್ಡ್‌ನಲ್ಲಿ ಉಪತಹಶೀಲ್ದಾರ್ ಕಚೇರಿಯನ್ನು ಹಾಗೂ ಬಸ್‌ನಿಲ್ದಾಣದ ಸಮೀಪ ವಿರುವ ಹೆರಿಗೆ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.
‘ಬೆಂಗಳೂರು ಒನ್’ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಮೇಯರ್ ಮಂಜುನಾಥ ರೆಡ್ಡಿ, ಮೂರು ಕೋಟಿ ರೂ.ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದ್ದು, ಈ ಕಟ್ಟಡದಲ್ಲಿ ಸಾರ್ವಜನಿಕರಿಗೆ 23 ಸೇವೆಗಳು ಲಭ್ಯವಿದೆ ಎಂದ ಅವರು, ನಗರದಲ್ಲಿ ಕಸದ ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರ ಸಹಕಾರ ತೀರ ಆವಶ್ಯ. ಈ ಬಗ್ಗೆ ಸಾರ್ವಜನಿಕರು ಗಂಭೀರವಾಗಿ ಚಿಂತಿಸಬೇಕೆಂದರು.
ಬಿಬಿಎಂಪಿ ಕಸ ಸಮಸ್ಯೆಯ ಪರಿಹಾರಕ್ಕಾಗಿ ಕೋಟ್ಯಂತರ ರೂ ವೆಚ್ಚ ಮಾಡುತ್ತಿದೆ. ಈ ಹಣವನ್ನು ಸದ್ಭಳಕೆ ಮಾಡಿಕೊಳ್ಳುವುದು ಜನತೆಯ ಜವಾಬ್ದಾರಿ ಎಂದು ತಿಳಿಸಿದರು.







