189 ಮತಕ್ಷೇತ್ರಗಳಲ್ಲಿ ‘ಗ್ರಾಮ ವಿಕಾಸ’ಯೋಜನೆ ಆರಂಭ: ಎಚ್.ಕೆ.ಪಾಟೀಲ್

ಬೆಂಗಳೂರು, ಜ.7: ಗ್ರಾಮಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ‘ಗ್ರಾಮ ವಿಕಾಸ’ಯೋಜನೆಯನ್ನು ಆರಂಭಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಗರಿಷ್ಠ 5 ಗ್ರಾಮಗಳು(ಎಸ್ಸಿ, ಎಸ್ಟಿ ಹೆಚ್ಚು ಜನವಸತಿ ಉಳ್ಳ 2 ಗ್ರಾಮಗಳು ಸೇರಿದಂತೆ) ಒಟ್ಟು 189 ಮತಕ್ಷೇತ್ರಗಳಿಗೆ ತಲಾ 5 ಗ್ರಾಮಗಳು ಸೇರಿದ ಒಟ್ಟು 1 ಸಾವಿರ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಪ್ರತಿಯೊಂದು ಮತಕ್ಷೇತ್ರಕ್ಕೂ ಗರಿಷ್ಠ 3.50 ಕೋಟಿ ರೂ. ಈ ಯೋಜನೆಯಡಿ ಒದಗಿಸಲಾಗುವುದು. ಮೊದಲ ಹಂತದಲ್ಲಿ ರಾಜ್ಯ ಸರಕಾರವು ಈಗಾಗಲೆ 189 ಮತಕ್ಷೇತ್ರಗಳಿಗೆ ತಲಾ ಒಂದು ಕೋಟಿ ರೂ. 189 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಮೂಲಕ ಗ್ರಾಮ ಪಂಚಾಯತ್‌ನ ವಿಶೇಷ ಬ್ಯಾಂಕ್‌ಖಾತೆ ಗಳಿಗೆ ಅನುದಾನವನ್ನು ಜಮೆ ಮಾಡ ಲಾಗುವುದು. ಗ್ರಾಮದೊಳಗಿನ ಪರಿಸರ ವನ್ನು ಉತ್ತಮಪಡಿಸಲು ರಸ್ತೆ, ಚರಂಡಿಗಳಿಗೆ ಶೇ.50ರಷ್ಟು ಅನುದಾನವನ್ನು ವಿನಿ ಯೋಗಿಸಬೇಕು ಎಂದು ಅವರು ತಿಳಿಸಿದರು.
ಗ್ರಂಥಾಲಯ, ಸಾಹಿತಿ ಕಲಾವಿದರ ಸ್ಮಾರಕ, ಸಭಾಭವನ ಹಾಗೂ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಶೇ.12ರಷ್ಟು, ಯುವಕ, ಯುವತಿ ಮಂಡಳಿಗಳ ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗಾಗಿ ಜಿಮ್, ಗರಡಿ ಮನೆ, ಫ್ಲಡ್‌ಲೈಟ್ ಆಟದ ಮೈದಾನ, ದೇಶಿ ಕ್ರೀಡೆ ಅಭಿವೃದ್ಧಿ ಚಟುವಟಿಕೆಗಳಿಗೆ ಶೇ.12ರಷ್ಟು, ಸೌರ ಬೆಳಕು ದೀಪಗಳ ಅಳವಡಿಕೆ, ಎಲ್‌ಇಡಿ ದೀಪಗಳಿಗೆ ಶೇ.3ರಷ್ಟು ಅನುದಾನವನ್ನು ಖರ್ಚು ಮಾಡಬೇಕು ಎಂದು ಎಚ್.ಕೆ.ಪಾಟೀಲ್ ಹೇಳಿದರು.
ತಿಪ್ಪೆ, ತಿಪ್ಪೆಗುಂಡಿಗಳ ವೈಜ್ಞಾನಿಕ ಹಾಗೂ ಆಧುನಿಕ ರೀತಿಯಲ್ಲಿ ಸಂಸ್ಕರಣೆ ಮಾಡುವ ಘಟಕಗಳ ನಿರ್ಮಾಣ ಮಾಡಲು ಶೇ.10ರಷ್ಟು, ಗ್ರಾಮ ಪಂಚಾಯತ್ ನಡಾವಳಿಗಳನ್ನು ಟಿ.ವಿ ಮೂಲಕ ನೇರಪ್ರಸಾರ ಹಾಗೂ ಮೂಲ ಸೌಕರ್ಯಕ್ಕೆ ಶೇ.2, ಗುಡಿ, ಮಸೀದಿ, ಚರ್ಚ್‌ಗಳ ಪುನರುಜ್ಜೀವನ, ಜೀರ್ಣೋದ್ಧಾರ, ಕಟ್ಟಡ ನಿರ್ಮಾಣಕ್ಕಾಗಿ ಶೇ.6 ಹಾಗೂ ವಿಶೇಷ ನಿಧಿಗಾಗಿ ಶೇ.5ರಷ್ಟು ಹಣವನ್ನು ವಿನಿಯೋಗಿಸಲಾಗುವುದು ಎಂದು ಅವರು ಹೇಳಿದರು.
ರೈತರ ಕಣ, ಕುರಿದೊಡ್ಡಿಗಳ ಸುಧಾರಣೆಯೂ ಈ ಗ್ರಾಮವಿಕಾಸ ಯೋಜನೆಯಲ್ಲಿ ಬರಲಿದೆ. ಸುವರ್ಣ ಗ್ರಾಮ ಯೋಜನೆಯಡಿ ಅಳವಡಿಸಲಾಗಿರುವ 21 ಅಂಶಗಳ ಕಾರ್ಯಕ್ರಮವನ್ನು ಈ ಯೋಜನೆಯ ವ್ಯಾಪ್ತಿಯಲ್ಲಿ ಬರಲಿದೆ. 2014-15ನೆ ಸಾಲಿನಲ್ಲಿ 134 ಕೋಟಿ ರೂ.ಸುವರ್ಣ ಗ್ರಾಮಯೋಜನೆಯಲ್ಲಿ ಖರ್ಚು ಮಾಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ಗ್ರಾಮ ಪಂಚಾಯತ್‌ಗಳಲ್ಲಿ 43 ಸೇವೆಗಳನ್ನು ಇದೇ ಮೊದಲ ಬಾರಿಗೆ ಆನ್‌ಲೈನ್ ವ್ಯಾಪ್ತಿಗೆ ತರುತ್ತಿದ್ದೇವೆ. ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕ್ಳೊಲಾಗಿದ್ದು, ಇ-ಆಡಳಿತದ ಪ್ರಯೋಜನ ಗ್ರಾಮೀಣ ಭಾಗದ ಜನರಿಗೂ ಸಿಗಬೇಕು ಎಂಬುದು ನಮ್ಮ ಆಶಯ ಎಂದು ಅವರು ಹೇಳಿದರು.
ಮುಂದಿನ ಮಾರ್ಚ್ ನಂತರ ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ಬದಲಾವಣೆ, ಹೊಸ ನೀರಿನ ಸಂಪರ್ಕ, ಕೊಳವೆ ಬಾವಿ ಕೊರೆಸಲು ಅನುಮತಿ, ಆಸ್ತಿ ತೆರಿಗೆ ಪತ್ರ, ನೀರಿನ ಶುಲ್ಕ ಪಾವತಿ, ವಾಹನ ತೆರಿಗೆ ಪಾವತಿ, ಮಾರುಕಟ್ಟೆ ಶುಲ್ಕ, ಜಾತ್ರೆ ಶುಲ್ಕ, ಉದ್ಯೋಗ ಕಾರ್ಡ್‌ಗಳ ವಿತರಣೆ ಸೇರಿದಂತೆ 43 ಸೇವೆಗಳು ಆನ್‌ಲೈನ್ ವ್ಯಾಪ್ತಿಗೆ ಬರಲಿವೆ ಎಂದು ಅವರು ತಿಳಿಸಿದರು.
ಹೊಸದಾಗಿ ಸೃಷ್ಟಿಯಾದ 454 ಗ್ರಾಮ ಪಂಚಾಯತ್‌ನ ವ್ಯಾಪ್ತಿಯಲ್ಲಿ ಇನ್ನು ಕೆಲವು ಕಡೆ ಕಂಪ್ಯೂಟರ್‌ಗಳು, ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಶೀಘ್ರವೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.







